ಪುತ್ತೂರು: ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪೆನಿಯ ವಾರ್ಷಿಕ ಮಹಾಸಭೆ ಪುತ್ತೂರು ಜೈನಭವನದಲ್ಲಿ ಜೂ. 26 ರಂದು ನಡೆಯಿತು.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪೆನಿ ಸಲಹೆಗಾರ ಶಂಕರ ಭಟ್ ಬದನಾಜೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕರಾವಳಿ ಪ್ರದೇಶದಲ್ಲಿ ಅದರಲ್ಲೂ ಸಮುದ್ರ ತೀರ ಪ್ರದೇಶದಲ್ಲಿ ತೆಂಗು ಬೆಳೆ ಅಧಿಕವಾಗಿ ಬೆಳೆಯುತ್ತದೆ. ಕೇರಳ ಎಂಬ ಹೆಸರು ಬಂದಿದ್ದೇ ತೆಂಗಿನಿಂದಾಗಿ. ಕಲ್ಪವೃಕ್ಷ ಎಂದೇ ಕರೆಯಲ್ಪಡುವ ತೆಂಗು ಪ್ರಸ್ತುತ ಮೌಲ್ಯವರ್ಧಿತ ಉತ್ಪನ್ನಗಳಲ್ಲಿ ದೇಶಾದ್ಯಂತ ತನ್ನದೇ ಆದ ಛಾಪನ್ನು ಮೂಡಿಸಿದೆ. ಔಷಧವಾಗಿಯೂ ತೆಂಗಿನ ಮರದ ವಿವಿಧ ಭಾಗಗಳು ಉಪಯೋಗಿಸಲ್ಪಡುತ್ತಿದೆ. ಸುಮಾರು 10 ರಿಂದ 12 ಔಷಧಗಳಿಗೆ ಉಪಯೋಗವಾಗುತ್ತಿದೆ. ಅಲ್ಲದೆ ಧಾರ್ಮಿಕ ಮಹತ್ವವನ್ನೂ ಪಡೆದಿದೆ. ಈ ನಿಟ್ಟಿನಲ್ಲಿ ತೆಂಗು ರೈತ ಉತ್ಪಾದಕರ ಕಂಪೆನಿ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ಮಹಿಳೆಯರಿಗೆ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಿರುವುದು ಶ್ಲಾಘನೀಯ ಎಂದರು.

ಕಂಪನಿ ಗೌರವಾಧ್ಯಕ್ಷ ಸುಭಾಸ್ ರೈ ಕಡಮಜಲು ಮಾತನಾಡಿ ಪ್ರಸ್ತುತ ತೆಂಗಿನ ಬೆಲೆ ಏರಿಕೆಯಲ್ಲಿ ತೆಂಗು ರೈತ ಉತ್ಪಾದಕರ ಕಂಪನಿಯ ಪಾತ್ರ ಬಹಳಷ್ಟಿದೆ. ಕಂಪೆನಿಯ ಮುಂದಿನ ಯೋಜನೆ, ಯೋಚನೆ ಕಾರ್ಯರೂಪಕ್ಕೆ ಬಂದರೆ ಕಂಪನಿ ಬೆಳೆಯುವುದರ ಜತೆಗೆ ರೈತರಿಗೂ ಉಪಯೋಗವಾಗಲಿದೆ ಎಂದ ಅವರು, ರೈತ ಆತ್ಮತೃಪ್ತಿ ಕಂಡುಕೊಂಡರೆ ಬದುಕಿನಲ್ಲಿ ಸಂತೃಪ್ತಿ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಕಂಪೆನಿಯ ಬೆಳವಣಿಗೆಗೆ ನಾವೆಲ್ಲರೂ ಶ್ರಮಿಸೋಣ. ಸದೃಢ ಕಂಪೆನಿಯಾಗಿ ಬೆಳೆಯಲಿ ಎಂದರು.

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಕುಸುಮಾಧರ್ ಎಸ್.ಕೆ. ಸಮಾರಂಭದ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, 2021 ರಲ್ಲಿ ಕಂಪನಿ ಆರಂಭಗೊಂಡಿದ್ದು, ರಾಜ್ಯಾದ್ಯಂತ ಸುಮಾರು 20 ಸಾವಿರ ರೈತ ಸದಸ್ಯರಿದ್ದಾರೆ. ಕಂಪನಿ ಸಿಪಿಸಿಆರ್‌ಐ, ರಾಷ್ಟ್ರಮಟ್ಟದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕಂಪನಿಯನ್ನು ದೇಶಾದ್ಯಂತ ವಿಸ್ತರಿಸುವ ಯೋಜನೆಯಿದೆ. ತೆಂಗಿನ ಮರದ ಬೇರಿನಿಂದ ಹಿಡಿದು ಗರಿ ತನಕ ವಿವಿಧ ಉತ್ಪನ್ನಗಳು, ತೆಂಗಿನಿಂದ ಕಲ್ಪರಸ, ಐಸ್‌ಕ್ರೀಂ, ಗೆರಟೆಯಿಂದ ವಿವಿಧ ಆಲಂಕಾರಿಕ ವಸ್ತುಗಳು ತಯಾರಿಕೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸುಮಾರು ಒಂದು ಲಕ್ಷ ಮಹಿಳೆಯರಿಗೆ ಸ್ವ ಸ್ವದ್ಯೋಗ ದೊರಕಿಸಿ ಸ್ವಾವಲಂಬಿಗಳನ್ನಾಗಿ ಬದುಕಲು ಅನುವು ಮಾಡಿಕೊಡಲಾಗುವುದು ಎಂದರು.

ಮುಖ್ಯ ಸಲಹೆಗಾರ ಯತೀಶ್ ಕಂಪನಿಯ ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು.ಕಂಪನಿಯ ನವ್ಯ ವಾರ್ಷಿಕ ವರದಿ ವಾಚಿಸಿದರು. ಬೆಂಗಳೂರಿನ ಹೇಮಂತ್ ಆ್ಯಂಡ್ ಅಸೋಸಿಯೇಟ್‌ಸ್‌ನ ಕಿರಣ್ ಕಂಪನಿಯ ಲೆಕ್ಕಪತ್ರ ಮಂಡನೆ ಮಾಡಿದರು. ಸರಸ್ವತಿ ಪ್ರಾರ್ಥನೆ ಹಾಡಿದರು. ಕಂಪನಿ ಉಪಾಧ್ಯಕ್ಷ ಗಿರಿಧರ ಸ್ಕಂದ ಸ್ವಾಗತಿಸಿದರು. ಸಿಬ್ಬಂದಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ತಿಮ್ಮಪ್ಪ ಬಿ. ವಂದಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಚಿದಾನಂದ ಬೈಲಾಡಿ, ವೇದಿಕೆಯಲ್ಲಿ ನಿರ್ದೇಶಕರಾದ ಲತಾ, ತಿಮ್ಮಪ್ಪ, ಹರಿಪ್ರಸಾದ್, ವಸಂತ ಕೆ., ನಿತ್ಯಾನಂದ ಮುಂಡೋಡಿ, ಕುಮಾರ್ ಪೆರ್ನಾಜೆ, ಮಹಾಲಿಂಗ ನಾಯ್ಕ ಅಮೈ, ಗಣಪತಿ, ಪೂವಪ್ಪ ಗೌಡ, ಡೇವಿಡ್ ಕೊಕ್ಕಡ ಸೇರಿದಂತೆ ಹಲವು ಮಂದಿ ಅತಿಥಿ ಗಣ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



