Breaking
21 Sep 2026, Mon

ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ದರೋಡೆ ಪ್ರಕರಣದ ವಾರಂಟ್ ಆರೋಪಿ ಬಂಧನ

ಧರ್ಮಸ್ಥಳ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತನನ್ನು ಬೆಂಗಳೂರು ನಿವಾಸಿ ಮೂರ್ತಿ ಅಲಿಯಾಸ್ ಪಿಂಟು (37) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 395, 397 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆಗೆ ಹಲವು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಯ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.

ವಾರಂಟ್ ಜಾರಿಗೊಳಿಸುವ ಕಾರ್ಯಾಚರಣೆ ನಡೆಸಿದ ಧರ್ಮಸ್ಥಳ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವೃಷಭ ಮತ್ತು ಚರಣ್ ರಾಜ್ ಅವರು ಬೆಂಗಳೂರಿನಲ್ಲಿ ಆರೋಪಿಯ ಸುಳಿವು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದರು.

ಬಂಧಿತನನ್ನು ಆಗಸ್ಟ್ 5ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *