ಬಂಟ್ವಾಳ: ಆರ್ಥಿಕ ಸಂಕಷ್ಟದ ನಡುವೆಯೂ ಮುಂಬೈನಲ್ಲಿ ದುಡಿಯುತ್ತಾ ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿ, ಎಂಬಿಎ ಹಾಗೂ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪದವಿ ಗಳಿಸಿದ ರಾಯಿ ಮೂಲದ ಸಾಧಕ ಶ್ರೀನಿವಾಸ ಪಿ. ಸಪಲ್ಯ ಅವರು ಪ್ರಸಕ್ತ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಯಿ ಹಾಗೂ ಕೊಯಿಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಶ್ರೀನಿವಾಸ ಸಪಲ್ಯ ಅವರು, ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿದರು. ಅಲ್ಲಿ ವಿವಿಧ ಕಡೆಗಳಲ್ಲಿ ದುಡಿಯುತ್ತಲೇ ರಾತ್ರಿ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿ, ಪ್ರೌಢಶಿಕ್ಷಣದಿಂದ ಪದವಿ ಹಂತದವರೆಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಬಳಿಕ ಹೈದರಾಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ನಲ್ಲಿ ಎಂಬಿಎ ಹಾಗೂ ಸಿಎ ಪದವಿ ಗಳಿಸಿ ಗಮನಾರ್ಹ ಶೈಕ್ಷಣಿಕ ಸಾಧನೆ ಮಾಡಿದರು.
ಪ್ರಸ್ತುತ ಮುಂಬೈನ ಜೆ.ಬಿ. ಅಡ್ವಾಣಿ ಕಂಪೆನಿಯಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ವೃತ್ತಿಜೀವನದ ಜೊತೆಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.

ಮುಂಬೈನ ಬೊರಿವಿಲಿ ತುಳು ಸಂಘ, ಮಾಟುಂಗ ಮತ್ತು ಗೋರೆಗಾಂವ್ ಕರ್ನಾಟಕ ಸಂಘ ಹಾಗೂ ಮಲಾಡ್ ಶನಿ ಮಹಾತ್ಮಾ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು, ಯಕ್ಷಗಾನ ಕಲಾವಿದ ಹಾಗೂ ಭಾಗವತರಾಗಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಮುಂಬೈ ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಾರಾಷ್ಟ್ರದಲ್ಲಿ ಗಾಣಿಗ ಸಮುದಾಯವನ್ನು ಹಿಂದುಳಿದ ವರ್ಗ ‘ಎ’ ಮೀಸಲಾತಿಗೆ ಸೇರ್ಪಡೆಗೊಳಿಸುವ ಪ್ರಯತ್ನದಲ್ಲಿಯೂ ಯಶಸ್ಸು ಕಂಡಿದ್ದಾರೆ.

ಪ್ರತಿವರ್ಷ ನೂರಾರು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸುವುದು, ಯುವಜನರಲ್ಲಿ ಸ್ವಾವಲಂಬನೆಯ ಮನೋಭಾವ ಬೆಳೆಸುವುದು, ನಿರ್ಗತಿಕರಿಗೆ ವಸತಿ ಹಾಗೂ ಪಡಿತರ ಸಾಮಗ್ರಿಗಳನ್ನು ವಿತರಿಸುವುದು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಮುಂಬೈ ವಿಶ್ವವಿದ್ಯಾನಿಲಯದ ಗೌರವಾರ್ಪಣೆ, ಜಯ ಸುವರ್ಣ ಸಮಾಜ ರತ್ನ ಪ್ರಶಸ್ತಿ, ಪುಂಜಾಲಕಟ್ಟೆ ಸ್ವಸ್ತಿಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಗೌರವಗಳು ಸಂದಿವೆ.
ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಮತ್ತು ಜೀರ್ಣೋದ್ಧಾರ ಕಾರ್ಯಗಳಲ್ಲಿಯೂ ಶ್ರೀನಿವಾಸ ಸಪಲ್ಯ ಅವರ ಕೊಡುಗೆ ಗಮನಾರ್ಹವಾಗಿದೆ. ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಾಡಬೆಟ್ಟು ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನ, ಅತ್ತಾವರ ಶ್ರೀ ಉಮಾಮಹೇಶ್ವರ ದೇವಸ್ಥಾನ, ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರ, ಮಂಜೇಶ್ವರ ಶ್ರೀ ಕೀರ್ತೇಶ್ವರ ದೇವಸ್ಥಾನ, ಆದ್ಯಪಾಡಿ ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಪುತ್ತೂರು ಬೆಟ್ಟ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಉದಾರ ನೆರವು ನೀಡಿದ್ದಾರೆ.

ಪ್ರಶಸ್ತಿ ಸಾಧನೆಗೆ ಮೆಚ್ಚುಗೆ
ಕೆ. ರಮೇಶ್ ನಾಯಕ್ ರಾಯಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕರು, ಮಾತನಾಡಿ, “ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಅವರ ಸಮಾಜಮುಖಿ ಚಟುವಟಿಕೆಗಳಿಗೆ ಮತ್ತಷ್ಟು ಹೆಚ್ಚಿನ ಶಕ್ತಿ ನೀಡಿದಂತಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅವರ ಸಹೋದರ ಮಧುಕರ ಬಂಗೇರ ರಾಯಿ ಅವರು, “ಬಾಲ್ಯದಲ್ಲಿ ಶಿಕ್ಷಣ ಪಡೆಯಲು ತಾವು ಅನುಭವಿಸಿದ ಕಷ್ಟವನ್ನು ಇತರ ಬಡ ಮಕ್ಕಳು ಅನುಭವಿಸಬಾರದು ಎಂಬ ಕಳಕಳಿ ಶ್ರೀನಿವಾಸ ಅವರಲ್ಲಿದೆ” ಎಂದು ತಿಳಿಸಿದ್ದಾರೆ.

ಗ್ರಾಮೀಣ ಹಿನ್ನೆಲೆಯಿಂದ ಬಂದು, ಆರ್ಥಿಕ ಸಂಕಷ್ಟಗಳನ್ನೂ ಮೆಟ್ಟಿ ನಿಂತು ಶಿಕ್ಷಣ, ವೃತ್ತಿ ಹಾಗೂ ಸಮಾಜಸೇವೆಯಲ್ಲಿ ಸಾಧನೆಯ ಹೆಜ್ಜೆ ಗುರುತು ಮೂಡಿಸಿರುವ ಶ್ರೀನಿವಾಸ ಪಿ. ಸಪಲ್ಯ ಅವರ ಜೀವನ ಇಂದಿನ ಯುವಜನತೆಗೆ ಮಾದರಿಯಾಗಿದೆ. ಅವರಿಗೆ ಸಂದಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಅವರ ನಿರಂತರ ಪರಿಶ್ರಮ, ಛಲ ಹಾಗೂ ಬಹುಮುಖ ಸಮಾಜಸೇವೆಗೆ ಸಂದಿರುವ ಗೌರವವಾಗಿದೆ.


