ಮಹಾರಾಷ್ಟ್ರದ ಮುಂಬೈನಲ್ಲಿ 21 ಅಂತಸ್ತಿನ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೂವರು ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಮುಂಬೈನ ಘಾಟ್ಕೋಪರ್ ಪೂರ್ವದ ಪಂತ್ನಗರದ ವಲ್ಲಭ್ ಬಾಗ್ ಲೇನ್ನಲ್ಲಿರುವ ರಾಯಲ್ ಅಲ್ಟೆಝಾ ವಸತಿ ಕಟ್ಟಡದ 20ನೇ ಮಹಡಿಯಲ್ಲಿ ರಾತ್ರಿ 8.08ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಕಟ್ಟಡದ ಮೇಲಿನ ಮಹಡಿಯಲ್ಲಿ ದಟ್ಟ ಹೊಗೆ ಆವರಿಸಿದ್ದು, ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯಲ್ಲಿ ಸಾಯಿನಾಥ್ ಅವಾಲೆ (45) ಎಂಬವರು ಶೇ.27ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಅವರನ್ನು ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ನೀರವ್ ಲೋಡಯಾ (34) ಮತ್ತು ರಾಜೇಶ್ ಲೋಡಯಾ (47) ಎಂಬವರಿಗೂ ಗಾಯಗಳಾಗಿದ್ದು, ಅವರನ್ನು ಸಮೀಪದ ಜೈನೋವಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿಯೂ ಸ್ಥಿರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಗ್ನಿ ಅವಘಡದ ತೀವ್ರತೆಯನ್ನು ಗಮನಿಸಿ ಬೆಂಕಿಯನ್ನು ಲೆವೆಲ್-2 ಎಂದು ವರ್ಗೀಕರಿಸಲಾಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಮುಂಬೈ ಅಗ್ನಿಶಾಮಕ ದಳದ ಸಿಬ್ಬಂದಿ ಎಂಟಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಹಾಗೂ ಅಗತ್ಯ ಉಪಕರಣಗಳೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸತತ ಎರಡು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡದಲ್ಲಿದ್ದ ನಿವಾಸಿಗಳನ್ನು ಸುರಕ್ಷಿತವಾಗಿ ಹೊರಗೆ ಸ್ಥಳಾಂತರಿಸಲಾಯಿತು. ಕಟ್ಟಡದೊಳಗೆ ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಶೋಧ ಕಾರ್ಯಾಚರಣೆಯನ್ನೂ ನಡೆಸಲಾಯಿತು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಪಟಾಕಿ ಸಿಡಿತ ಅಥವಾ ರಾಕೆಟ್ ಕಟ್ಟಡಕ್ಕೆ ಬಡಿದ ಪರಿಣಾಮ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಮುಂಬೈ ಅಗ್ನಿಶಾಮಕ ದಳ, ಪೊಲೀಸರು, ಅದಾನಿ ವಿದ್ಯುತ್ ಸಂಸ್ಥೆ, ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ನಾಗರಿಕ ವಾರ್ಡ್ ಕಚೇರಿಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಂಬೈ ಮೇಯರ್ ರಿತು ತಾವ್ಡೆ ಅವರು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಪರಿಶೀಲನೆ ನಡೆಸಿದರು. ಘಟನೆಯ ಕುರಿತು ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.






