Breaking
23 Oct 2026, Fri

ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ: ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಕೆಟ್ಟ ಹೆಸರು ತರಲು ಯತ್ನಿಸುತ್ತಿದೆ ಎಂದು ಆರೋಪ

ನವದೆಹಲಿ: ಕಾಂಗ್ರೆಸ್ ಪಕ್ಷವು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದೆ. ಸಂಸತ್ ಕಲಾಪಗಳಿಗೆ ಅಡ್ಡಿಪಡಿಸುವುದರ ಜೊತೆಗೆ, ಇತರ ವಿರೋಧ ಪಕ್ಷಗಳ ನಾಯಕರಿಗೂ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಗುರುವಾರ ದೆಹಲಿಯಲ್ಲಿ ನಡೆದ ಮಾಧ್ಯಮ ಸಂಸ್ಥೆಯೊಂದರ ಶೃಂಗಸಭೆಯಲ್ಲಿ ಮಾತನಾಡಿದ ಅವರು, ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


“ಜಗತ್ತು ಹೊಸ ವ್ಯವಸ್ಥೆಯ ಹುಡುಕಾಟದಲ್ಲಿರುವಾಗ, ಕೆಲವರು ಭಾರತದಲ್ಲಿ ಅರಾಜಕತೆಯ ಕನಸು ಕಾಣುತ್ತಿದ್ದಾರೆ. ವಿದೇಶಗಳಲ್ಲಿ ಭಾರತದ ಗೌರವಕ್ಕೆ ಧಕ್ಕೆ ತರುವ ಮೂಲಕ ವಿರೋಧ ಪಕ್ಷದ ನಾಯಕರು ದೇಶದ ಪ್ರತಿಷ್ಠೆಗೆ ಹಾನಿ ಮಾಡುತ್ತಿದ್ದಾರೆ” ಎಂದು ಮೋದಿ ಟೀಕಿಸಿದರು.
ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಮತ್ತು ಅರಾಜಕತೆಯ ವಾತಾವರಣವಿರುವ ಈ ಸಂದರ್ಭದಲ್ಲಿ, ಬಲಿಷ್ಠ ಭಾರತದ ಚಿತ್ರಣವನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸುವ ಅಗತ್ಯವಿದೆ. ಆದರೆ, ಕೆಲವರು ಭಾರತದ ಗೌರವಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶಗಳಿಗೆ ಭೇಟಿ ನೀಡಿದಾಗ ಭಾರತಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಾರೆ. ಅಲ್ಲದೆ, ಭಾರತದ ಆಂತರಿಕ ವಿಚಾರಗಳಲ್ಲಿ ವಿದೇಶಿಯರು ಹಸ್ತಕ್ಷೇಪ ಮಾಡುವಂತೆ ಮನವಿ ಮಾಡುತ್ತಾರೆ ಎಂದು ಮೋದಿ ಪರೋಕ್ಷವಾಗಿ ಆರೋಪಿಸಿದರು.


ಕಾಂಗ್ರೆಸ್ನ ನಾಯಕತ್ವದ ಪ್ರಯತ್ನಗಳನ್ನು ವ್ಯಂಗ್ಯವಾಡಿದ ಪ್ರಧಾನಿ, ಒಂದು ವರ್ಷದಲ್ಲಿ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ನಡೆಯುವ ಉಡಾವಣೆಗಳಿಗಿಂತಲೂ ಪಕ್ಷವು ತನ್ನ ನಾಯಕನನ್ನು ಮುಂಚೂಣಿಗೆ ತರಲು ನಡೆಸುವ ವಿಫಲ ಪ್ರಯತ್ನಗಳೇ ಹೆಚ್ಚಾಗಿವೆ ಎಂದು ಟೀಕಿಸಿದರು.
ಕಾಂಗ್ರೆಸ್ ತನ್ನ ನಿರಂತರ ವೈಫಲ್ಯಗಳಿಂದ ಎದುರಾಗಿರುವ ಟೀಕೆಗಳಿಂದ ಗಾಂಧಿ ಕುಟುಂಬವನ್ನು ರಕ್ಷಿಸುವ ಪ್ರಯತ್ನದಲ್ಲಿ ಭಾರತದ ಸಾಧನೆಗಳು, ಸಾಮರ್ಥ್ಯ ಮತ್ತು ಪ್ರಗತಿಯ ಬಗ್ಗೆಯೇ ಅನುಮಾನಗಳನ್ನು ಹುಟ್ಟುಹಾಕುತ್ತಿದೆ ಎಂದು ಮೋದಿ ಆರೋಪಿಸಿದರು. ಪಕ್ಷವು ತನ್ನದೇ ಪತನಕ್ಕೆ ದಾರಿ ಮಾಡಿಕೊಳ್ಳುತ್ತಿರುವುದು ತಮ್ಮ ಸಮಸ್ಯೆಯಲ್ಲ ಎಂದ ಅವರು, ದೇಶದ ಸಾಧನೆಗಳನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.


“ದ್ರಾಕ್ಷಿ ಹಣ್ಣು ಅತಿಯಾಗಿ ಹುಳಿಯಾಗಿರುವುದರಿಂದ, ಕಾಂಗ್ರೆಸ್ ಈಗ ಆ ಹಣ್ಣುಗಳನ್ನು ನೀಡುವ ಬಳ್ಳಿಯನ್ನೇ ಕತ್ತರಿಸಲು ಮುಂದಾಗಿದೆ” ಎಂದು ರೂಪಕದ ಮೂಲಕ ಟೀಕಿಸಿದ ಮೋದಿ, ಗಾಂಧಿ ಕುಟುಂಬವೇ ಕಾಂಗ್ರೆಸ್ಗೆ ಹೊರೆಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ನ ಹಿರಿಯ ನಾಯಕರಿಗೂ ಈ ವಾಸ್ತವ ತಿಳಿದಿದೆ. ಖಾಸಗಿ ಮಾತುಕತೆಗಳಲ್ಲಿ ಅವರು ಇದನ್ನು ಒಪ್ಪಿಕೊಳ್ಳುತ್ತಾರೆ. ಆದರೆ, ಸಾರ್ವಜನಿಕವಾಗಿ ಮಾತನಾಡದೆ ಮೌನವಾಗಿರಲು ನಿರ್ಧರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *