ಬಂಟ್ವಾಳ: ತಾಲ್ಲೂಕಿನ ವಿವಿಧೆಡೆ ಕಳೆದ ಎರಡು ದಿನಗಳಿಂದ ಭಾರೀ ಗುಡುಗು ಸಹಿತ ಮಳೆಯಾಗುತ್ತಿದ್ದು, ಹಲವು ಮನೆಗಳಿಗೆ ಸಿಡಿಲು ಬಡಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಪಂಜಿಕಲ್ಲು ಗ್ರಾಮದ ಅಮೈ ನಿವಾಸಿ ಗೋಪಾಲ ಪೂಜಾರಿ ಅವರ ಮನೆಗೆ ಸಿಡಿಲು ಬಡಿದ ಪರಿಣಾಮ ಗೋಡೆ ಬಿರುಕು ಬಿಟ್ಟಿದ್ದು, ಮನೆಯಲ್ಲಿದ್ದ ವಿದ್ಯುತ್ ಪರಿಕರಗಳು ಸುಟ್ಟು ಕರಕಲಾಗಿವೆ. ಇದೇ ಗ್ರಾಮದ ಪಟ್ರಾಡಿ ನಿವಾಸಿ ಅಚ್ಚುತ ಆಚಾರ್ಯ ಅವರ ಮನೆಗೂ ಸಿಡಿಲು ಬಡಿದು ಹಾನಿಯಾಗಿದೆ.

ಮೂಡುಪಡುಕೋಡಿ ಗ್ರಾಮದ ಸೇವಾ ನಿವಾಸಿ ಜೋಹರ ಅಬ್ದುಲ್ ಜಬ್ಬಾರ್ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದ್ದರೆ, ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿ ನಿವಾಸಿ ಅಬ್ದುಲ್ ಹಮೀದ್ ಅವರ ಮನೆಯ ವಿದ್ಯುತ್ ಪರಿಕರಗಳು ಸಿಡಿಲಿನ ಹೊಡೆತಕ್ಕೆ ಹಾನಿಗೀಡಾಗಿವೆ. ಬಿಳಿಯೂರು ಗ್ರಾಮದ ಮೈರಕಟ್ಟೆ ನಿವಾಸಿ ಅಜೀಜ್ ಅವರ ಮನೆಗೂ ಸಿಡಿಲು ಬಡಿದು ಹಾನಿ ಸಂಭವಿಸಿದೆ.

ಇನ್ನು ಇಡ್ಕಿದು ಗ್ರಾಮದ ಸೇಕೆ ಬ್ಯಾರಿ ಅವರ ಮನೆಯ ಮಾಡು ಕುಸಿದು ಬಿದ್ದು ಹಾನಿಯಾಗಿದೆ. ಕೆದಿಲ ಗ್ರಾಮದ ವಳಂಗಾಜೆ ನಿವಾಸಿ ಮಹಾಬಲೇಶ್ವರ ಭಟ್ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ ಮಾಡಿಗೆ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.



