Breaking
22 Oct 2026, Thu

ಸಿದ್ಧಕಟ್ಟೆ ದಸರಾ ಸಮಾಪನ: ಸ್ಮಶಾನ ನಿರ್ವಾಹಕರಿಗೆ ಸನ್ಮಾನ

ಬಂಟ್ವಾಳ: ಜ್ಞಾನದಿಂದ ಅಣುಬಾಂಬ್ನಂತಹ ವಿನಾಶಕಾರಿ ಶಕ್ತಿಯನ್ನೂ ನಿಷ್ಕ್ರಿಯಗೊಳಿಸಲು ಸಾಧ್ಯ ಎಂಬ ಸತ್ಯವನ್ನು ಅರಿತುಕೊಳ್ಳಬೇಕು. ಆಯುಧಗಳಿಲ್ಲದೆ ಪುಸ್ತಕ, ಜಪಮಾಲೆ, ವೀಣೆ ಹಾಗೂ ಕಮಂಡಲವನ್ನು ಧರಿಸಿರುವ ಶಾರದೆಯು ಜಗತ್ತಿಗೆ ಶಾಂತಿ ಮತ್ತು ಜ್ಞಾನದ ಮಹತ್ವವನ್ನು ಸಾರುತ್ತಾಳೆ ಎಂದು ಚಿಂತಕ ಅರವಿಂದ ಚೊಕ್ಕಾಡಿ ಹೇಳಿದರು.


ಸಿದ್ಧಕಟ್ಟೆ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಭಾನುವಾರ ಸಮಾಪನಗೊಂಡ 8ನೇ ವರ್ಷದ ‘ಸಿದ್ಧಕಟ್ಟೆ ದಸರಾ’ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ ಶೆಟ್ಟಿ ಬಡಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಗೌರವಾಧ್ಯಕ್ಷ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಮತ್ತು ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ ಇಂಜಾಡಿ ಶುಭ ಹಾರೈಸಿದರು.


ಉದ್ಯಮಿ ವಿಜಯೇಂದ್ರ ಸೇಠ್, ಮೂಡ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಬಿಲ್ಲವ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ, ಸೈನಿಕ ಶ್ರೀಧರ ಅಂಚನ್ ಪಂಜಿಕಲ್ಲು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬೂಬ ಮಡಿವಾಳ, ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ನೋಣಯ ಶೆಟ್ಟಿಗಾರ್, ನಿವೃತ್ತ ಮುಖ್ಯಶಿಕ್ಷಕ ನಾರಾಯಣ ನಾಯಕ್ ಕರ್ಪೆ, ಎಎಸ್ಐ ಹರೀಶ ನಾಯ್ಕ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರವೀಂದ್ರ ನಾಯಕ್, ಕಂಬಳ ಕ್ಷೇತ್ರದ ಸಾಧಕ ಸಂಜೀವ ರೈ ಬೆಳ್ಳಿಪಾಡಿ ಹಾಗೂ ಶಿಕ್ಷಕ ಮಹೇಶ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.


ಸ್ಮಶಾನ ನಿರ್ವಾಹಕರಿಗೆ ಗೌರವ
ಕಾರ್ಯಕ್ರಮದಲ್ಲಿ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸ್ಮಶಾನ ನಿರ್ವಾಹಕರಾದ ರವಿ ಪೂಜಾರಿ ಪರನೀರು, ದಿನೇಶ ಪೂಜಾರಿ ಸಂಗಬೆಟ್ಟು ಹಾಗೂ ಬಿ. ದಯಾನಂದ ಸಪಲ್ಯ ರಾಯಿ ಅವರನ್ನು ಸನ್ಮಾನಿಸಲಾಯಿತು. ಅಂಚೆ ಪಾಲಕರಾದ ಶ್ರೀಧರ ಪೂಜಾರಿ, ವಿಶ್ವನಾಥ ನಾಯಕ್, ಭೋಜ ಶೆಟ್ಟಿಗಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೂ ಗೌರವ ಸಲ್ಲಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸಮಿತಿ ಸಂಚಾಲಕ ಜಗದೀಶ ಕೊಯಿಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸೋಮಶೇಖರ ರೈ ವಂದಿಸಿದರು. ಪ್ರಜ್ವಲ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *