ಮೂಡುಬಿದಿರೆ: ಬಟ್ಟೆ ಒಣಗಿಸುವ ವೇಳೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ತಾಯಿ ಮತ್ತು ಮಗ ದಾರುಣವಾಗಿ ಮೃತಪಟ್ಟ ಘಟನೆ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಗುರುವಾರ ನಡೆದಿದೆ.

ವರ್ಣಬೆಟ್ಟುವಿನ ನಿವಾಸಿಗಳಾದ ಮರ್ಸಿ ಮಸ್ಕರೇನಸ್ (45) ಮತ್ತು ಅವರ ಪುತ್ರ ಶೋನ್ ಮಸ್ಕರೇನಸ್ (18) ಮೃತ ದುರ್ದೈವಿಗಳು. ಬಟ್ಟೆ ಒಣಗಿಸುವ ಸಂದರ್ಭದಲ್ಲಿ ಮಗನಿಗೆ ವಿದ್ಯುತ್ ಶಾಕ್ ತಗುಲಿದ್ದು, ಆತನನ್ನು ರಕ್ಷಿಸಲು ಧಾವಿಸಿದ ತಾಯಿಗೂ ವಿದ್ಯುತ್ ಪ್ರವಹಿಸಿ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಮೂಡುಬಿದಿರೆಯ ಹೋಲಿ ರೋಸರಿ ಶಾಲೆಯ ವಿದ್ಯಾರ್ಥಿಯಾಗಿದ್ದ ಶೋನ್ ಬಟ್ಟೆ ಒಣಗಿಸಲು ಹಾಕಿದ್ದ ತಂತಿಗೆ ಹೈಟೆನ್ಶನ್ ವಿದ್ಯುತ್ ತಂತಿಯ ಸಂಪರ್ಕ ಉಂಟಾಗಿ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಗುರುವಾರ ಬೆಳಗ್ಗೆ ಸುಮಾರು 7ರಿಂದ 8 ಗಂಟೆಯ ನಡುವೆ ಘಟನೆ ಬೆಳಕಿಗೆ ಬಂದಿದೆ. ತೋಟದ ಕೆಲಸಕ್ಕೆ ಬಂದ ಕಾರ್ಮಿಕರೊಬ್ಬರು ಸ್ಥಳಕ್ಕೆ ಬಂದಾಗ ದುರಂತ ಗಮನಕ್ಕೆ ಬಂದಿದೆ.
ಮಾಹಿತಿ ತಿಳಿದ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.



