ಬಂಟ್ವಾಳ: ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ವತಿಯಿಂದ 24ನೇ ವರ್ಷದ ಶಾರದೋತ್ಸವದ ಅಂಗವಾಗಿ ಪೂಜಿಸಲಾದ ಶಾರದೆ ವಿಗ್ರಹದ ಶೋಭಾಯಾತ್ರೆ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಕೊಯಿಲ ಹನುಮಾನ್ ನಗರದಿಂದ ಆರಂಭಗೊಂಡ ಶೋಭಾಯಾತ್ರೆಯು ಅಣ್ಣಳಿಕೆ ಹಾಗೂ ರಾಯಿ ನಡುವಿನ ಪ್ರದೇಶಗಳಲ್ಲಿ ಸಾಗಿತು. ಆಕರ್ಷಕ ಮೆರವಣಿಗೆಯ ಬಳಿಕ ಕುದ್ಮಾಣಿ ಹೊಳೆಯಲ್ಲಿ ಶಾರದೆ ವಿಗ್ರಹವನ್ನು ವಿಸರ್ಜಿಸುವ ಮೂಲಕ ಶಾರದೋತ್ಸವಕ್ಕೆ ತೆರೆ ಎಳೆಯಲಾಯಿತು.
ಶೋಭಾಯಾತ್ರೆಯಲ್ಲಿ ನೃತ್ಯ ಭಜನೆ, ಸ್ತಬ್ಧಚಿತ್ರಗಳು ಹಾಗೂ ಸುಡುಮದ್ದು ಪ್ರದರ್ಶನ ಗಮನ ಸೆಳೆದವು. ರಸ್ತೆಯ ವಿವಿಧೆಡೆ ಸಂಗೀತ ರಸಮಂಜರಿ, ಯಕ್ಷ ತೆಲಿಕೆ ಹಾಗೂ ‘ವೈರಲ್ ವೈಶಾಲಿ’ ನಾಟಕ ಪ್ರದರ್ಶನಗೊಂಡು ಉತ್ಸವದ ಸಂಭ್ರಮವನ್ನು ಹೆಚ್ಚಿಸಿದವು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಎಂ. ದುರ್ಗದಾಸ್ ಶೆಟ್ಟಿ ಮಾವಂತೂರು, ಪ್ರಮುಖರಾದ ದಿನೇಶ್ ಶೆಟ್ಟಿ ಮಡಂದೂರು, ವಸಂತ ಕುಮಾರ್ ಅಣ್ಣಳಿಕೆ, ಡೊಂಬಯ್ಯ ಅರಳ, ರಮಾನಾಥ ರಾಯಿ, ಚಂದ್ರಶೇಖರ ಗೌಡ ಕಾರಂಬಡೆ, ಉಮೇಶ್ ಅರಳ, ಹರೀಶ ಬಾಡಬೆಟ್ಟು, ರಾಘವ ಅಮೀನ್, ಶರತ್ ಕುಮಾರ್ ಕೊಯಿಲ, ಸುರೇಂದ್ರ ಅಣ್ಣಳಿಕೆ, ರಂಜನ್ ಕುಮಾರ್ ಶೆಟ್ಟಿ, ಸಂತೋಷ್ ಕುಮಾರ್ ಚೌಟ, ಸಂತೋಷ್ ಕುಮಾರ್ ಬೆಟ್ಟು, ಧನಂಜಯ ಪಾಂಡವರಗುಡ್ಡೆ ಹಾಗೂ ಮಹಿಳಾ ಸಮಿತಿ ಅಧ್ಯಕ್ಷೆ ಸುನಿತಾ ಸತೀಶ್ ಕೊಯಿಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.



