ಮಂಡ್ಯ: ಆಯುಧ ಪೂಜೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಹಬ್ಬದ ದಿನವೇ ಬರಸಿಡಿಲು ಬಡಿದಂತಾಗಿದೆ. ಮನೆಯ ವಾಹನಗಳಿಗೆ ಪೂಜೆ ಸಲ್ಲಿಸಿದ ಬಳಿಕ ಕಾರು ಚಲಾಯಿಸುವ ವೇಳೆ ಚಕ್ರಕ್ಕೆ ಸಿಲುಕಿ ಮೂರು ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ಯರಗನಹಳ್ಳಿ ಗ್ರಾಮದ ಸಂಪತ್ ಅವರ ಪುತ್ರ ಕಂದನ್ ಎಸ್. ಗೌಡ (3) ಎಂದು ಗುರುತಿಸಲಾಗಿದೆ.
ಆಯುಧ ಪೂಜೆಯ ಪ್ರಯುಕ್ತ ಸಂಪತ್ ಅವರ ಕುಟುಂಬಸ್ಥರು ಮನೆಯ ವಾಹನಗಳಿಗೆ ಪೂಜೆ ಸಲ್ಲಿಸಿದ್ದರು. ಪೂಜಾ ಕಾರ್ಯಕ್ರಮ ಮುಗಿದ ಬಳಿಕ ಮನೆಯ ಮುಂದೆ ನಿಲ್ಲಿಸಲಾಗಿದ್ದ ಕಾರನ್ನು ಬೇರೆಡೆ ಪಾರ್ಕ್ ಮಾಡಲು ಸಂಪತ್ ಅವರ ಭಾವಮೈದ ಸಂಜಯ್ ಕಾರು ಹತ್ತಿ ಚಾಲನೆ ಮಾಡಲು ಮುಂದಾಗಿದ್ದರು.

ಈ ವೇಳೆ ಕಾರು ಚಲಿಸುವುದನ್ನು ಕಂಡ ಬಾಲಕ ಕಂದನ್, ಕಾರು ಹತ್ತುವ ಉದ್ದೇಶದಿಂದ ಅದರತ್ತ ಓಡಿಬಂದಿದ್ದಾನೆ. ಆದರೆ, ಮಗು ಬರುತ್ತಿರುವುದನ್ನು ಗಮನಿಸದ ಚಾಲಕ ಕಾರನ್ನು ಮುಂದೆ ಚಲಾಯಿಸಿದ್ದು, ಬಾಲಕ ಕಾರಿನ ಚಕ್ರಕ್ಕೆ ಸಿಲುಕಿದ್ದಾನೆ. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನನ್ನು ಕಂಡ ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ.

ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಕಂದನ್ ಮದ್ದೂರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.
ಆಯುಧ ಪೂಜೆಯ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಬಾಲಕನ ಸಾವಿನಿಂದಾಗಿ ಶೋಕ ಮಡುಗಟ್ಟಿದೆ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



