ಬೆಳ್ತಂಗಡಿ: ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಆಳವಾದ ನೀರಿಗೆ ಇಳಿದ ಯುವಕನೊಬ್ಬ ಮುಳುಗಿ ಮೃತಪಟ್ಟ ದಾರುಣ ಘಟನೆ ಅಕ್ಟೋಬರ್ 20ರಂದು ಮಧ್ಯಾಹ್ನ ನಿಡ್ಲೆ ಗ್ರಾಮದ ಪಾರ್ಪಿಕಲ್ಲು ಎಂಬಲ್ಲಿ ನಡೆದಿದೆ.

ಮೃತ ಯುವಕನನ್ನು ಕೌಕ್ರಾಡಿ ಗ್ರಾಮದ ಮೂಡುಬೈಲ್ ನಿವಾಸಿ ಜನಾರ್ದನ ಗೌಡ ಅವರ ಪುತ್ರ ಕೀರ್ತನ್ (21) ಎಂದು ಗುರುತಿಸಲಾಗಿದೆ.
ಕೀರ್ತನ್ ತನ್ನ ಸ್ನೇಹಿತರೊಂದಿಗೆ ನಿಡ್ಲೆ ಗ್ರಾಮದ ಪಾರ್ಪಿಕಲ್ಲು ನದಿಗೆ ಸ್ನಾನ ಮಾಡಲು ತೆರಳಿದ್ದನು. ಈ ವೇಳೆ ಆಳವಾದ ನೀರಿಗೆ ಇಳಿದ ಕೀರ್ತನ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ನೀರಿನಲ್ಲಿ ಮುಳುಗಿದ್ದ ಕೀರ್ತನ್ನ ಮೃತದೇಹವನ್ನು ಹೊರತೆಗೆದು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




