ಬೆಳಾಲು: ಇಲ್ಲಿನ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಡಿಸೆಂಬರ್ 25 ಮತ್ತು 26ರಂದು ನಡೆಯಲಿರುವ ವಾರ್ಷಿಕ ಜಾತ್ರಾಮಹೋತ್ಸವ ಹಾಗೂ ಪರಿವಾರ ದೈವಗಳ ನರ್ತನ ಸೇವೆಯ ಪೂರ್ವಭಾವಿ ಸಭೆ ದೇವಸ್ಥಾನದ ಅಕ್ಷೋಭ್ಯ ಭವನದಲ್ಲಿ ನಡೆಯಿತು.

ಸಭೆಯಲ್ಲಿ ವಾರ್ಷಿಕ ಜಾತ್ರಾಮಹೋತ್ಸವದ ನೂತನ ಪ್ರಧಾನ ಸಂಚಾಲಕರಾಗಿ ಶ್ರೀಮತಿ ಸರೋಜಿನಿ ಭೀಮಂಡೆ ಅವರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ, ಜಾತ್ರೋತ್ಸವದ ಯಶಸ್ವಿ ಆಯೋಜನೆಗಾಗಿ ವಿವಿಧ ಉಪಸಮಿತಿಗಳ ಸಂಚಾಲಕರು ಹಾಗೂ ಸಹಸಂಚಾಲಕರನ್ನು ನೇಮಕ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ವಹಿಸಿದ್ದರು. ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೇರ್ಮುನ್ನಾಯ, ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ ಉಪ್ಪಾರು, ಮಹಿಳಾ ಸಮಿತಿ ಅಧ್ಯಕ್ಷೆ ಹೇಮಲತಾ ಶ್ರೀನಿವಾಸ್, ಬೆಳಾಲುಗುತ್ತು ಮನೆಯ ಹೇಮಲತಾ ಜೀವಂಧರ ಕುಮಾರ್ ಜೈನ್ ಹಾಗೂ ಭಜನಾ ಮಂಡಳಿ ಅಧ್ಯಕ್ಷ ಹರೀಶ್ ಪೂಜಾರಿ ಪೋಸೊಟ್ಟು ಉಪಸ್ಥಿತರಿದ್ದರು.
ಸಭೆಯಲ್ಲಿ ವಿವಿಧ ಬೈಲುವಾರು ಸಮಿತಿಗಳ ಸದಸ್ಯರು, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ವಿದ್ಯಾ ಶ್ರೀನಿವಾಸ್, ಹಿರಿಯ ಸದಸ್ಯರಾದ ಉದಿತ್ ಕುಮಾರ್ ಜೈನ್, ದೇಜಪ್ಪ ಗೌಡ ಅರಣೆಮಾರು, ಸುಂದರ ಎಂ.ಕೆ., ಜಾರಪ್ಪ ಗೌಡ ಅರಣೆಮಾರು, ಬಾಬು ಆಚಾರ್ಯ, ಸೀತಾರಾಮ ಬಿ.ಎಸ್., ಶ್ರೀನಿವಾಸ ಗೌಡ ಗಣಪನಗುತ್ತು, ಮೋನಪ್ಪ ಪೂಜಾರಿ ಪೋಸೊಟ್ಟು, ಅನಂತೇಶ್ವರ ಭಜನಾ ಮಂಡಳಿ ಹಾಗೂ ಅನಂತೇಶ್ವರ ಫ್ರೆಂಡ್ಸ್‌ನ ಪದಾಧಿಕಾರಿಗಳು ಮತ್ತು ಊರಿನ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ ಸ್ವಾಗತಿಸಿದರು. ದೇವಸ್ಥಾನದ ಲೆಕ್ಕಪರಿಶೋಧಕ ನಾರಾಯಣ ಗೌಡ ಎಳ್ಳುಗದ್ದೆ ಅವರು ಅನಂತ ಚತುರ್ದಶಿಯ ಲೆಕ್ಕಪತ್ರಗಳನ್ನು ವಾಚಿಸಿದರು. ದೇವಸ್ಥಾನದ ಕಚೇರಿ ಮೇಲ್ವಿಚಾರಕರಾದ ಶಿವಪ್ರಸಾದ್ ಗೊಲ್ಲ ಮತ್ತು ಕಿರಣ್ ಸುವರ್ಣ ಇರಂತ್ಯಾರು ಕಾರ್ಯಕ್ರಮ ನಿರೂಪಿಸಿದರು. ಹೇಮಲತಾ ಶ್ರೀನಿವಾಸ್ ವಂದಿಸಿದರು.






