ಬೆಳ್ತಂಗಡಿ: ಮೈಸೂರು ದಸರಾ ಉತ್ಸವ ವೀಕ್ಷಿಸಿ ಬೈಕ್ನಲ್ಲಿ ಬೆಂಗಳೂರಿಗೆ ಮರಳುತ್ತಿದ್ದ ಬೆಳ್ತಂಗಡಿ ತಾಲೂಕಿನ ಯುವಕನೊಬ್ಬ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಮೈಸೂರಿನ ಸಿದ್ಧಾರ್ಥನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಭವಿಸಿದೆ.

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕೊಳಂಬೆ ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಮನೋಹರ (23) ಮೃತಪಟ್ಟ ಯುವಕ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಮನೋಹರ, ಅಕ್ಟೋಬರ್ 18ರಂದು ಸ್ನೇಹಿತ ದೀಕ್ಷಿತ್ ಅವರೊಂದಿಗೆ ಬೈಕ್ನಲ್ಲಿ ಮೈಸೂರಿಗೆ ತೆರಳಿ ದಸರಾ ಉತ್ಸವ ಹಾಗೂ ಕಂಬಳ ವೀಕ್ಷಿಸಿದ್ದರು.
ಬಳಿಕ ಅದೇ ರಾತ್ರಿ ಇಬ್ಬರೂ ಬೈಕ್ನಲ್ಲಿ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ಸಿದ್ಧಾರ್ಥನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 275ರ ಟ್ರಾಫಿಕ್ ಸಿಗ್ನಲ್ ಬಳಿ ಸ್ಕೂಟಿಯೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಬೈಕ್ನಿಂದ ರಸ್ತೆಗೆ ಎಸೆಯಲ್ಪಟ್ಟ ಮನೋಹರ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ನ ಹಿಂಬದಿ ಸವಾರನಾಗಿದ್ದ ಕೊಯ್ಯೂರು ಗ್ರಾಮದ ಬಿರ್ಕೆ ನಿವಾಸಿ ದೀಕ್ಷಿತ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯುವಕನ ಅಕಾಲಿಕ ಸಾವಿನ ಸುದ್ದಿ ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ತೀವ್ರ ದುಃಖ ಮೂಡಿಸಿದೆ.



