ಬೆಳ್ತಂಗಡಿ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 17ರಂದು ನಡೆದ 17ರ ವಯೋಮಾನದ ರಾಜ್ಯಮಟ್ಟದ ಬಾಲಕ ಹಾಗೂ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಒಂದೇ ಮನೆಯ ಸಹೋದರ-ಸಹೋದರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ ಅತ್ಯಾರಕಂಡ ನಿವಾಸಿಗಳಾದ ಕುಶಾಲಪ್ಪ ಗೌಡ ಮತ್ತು ಪ್ರಮೀಳಾ ಯಾನೆ ರೇವತಿ ದಂಪತಿಯ ಪುತ್ರ ಪ್ರಣೀಶ್ ಎ. ಹಾಗೂ ಪುತ್ರಿ ಚೈತನ್ಯ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಾಧಕರು.

ರಾಜ್ಯಮಟ್ಟದಲ್ಲಿ ಪ್ರಣೀಶ್ ತಂಡಕ್ಕೆ ಪ್ರಥಮ ಸ್ಥಾನ
17ರ ವಯೋಮಾನದ ಬಾಲಕರ ವಿಭಾಗದಲ್ಲಿ ಪ್ರಣೀಶ್ ಎ. ಪ್ರತಿನಿಧಿಸಿದ ತಂಡ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಪ್ರಣೀಶ್ ಅವರು ಬಂದಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದು, ಪ್ರಸ್ತುತ ಬಂಟ್ವಾಳ ತಾಲೂಕಿನ ಕೈರಂಗಳದ ಶಾರದಾ ವಿದ್ಯಾಗಣಪತಿ ಪುಣ್ಯಕೋಟಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನವೆಂಬರ್‌ನಲ್ಲಿ ಗುಜರಾತ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಚೈತನ್ಯ ತಂಡಕ್ಕೆ ದ್ವಿತೀಯ ಸ್ಥಾನ
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಚೈತನ್ಯ ಪ್ರತಿನಿಧಿಸಿದ ತಂಡ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಬಂದಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದಿರುವ ಚೈತನ್ಯ, ಪ್ರಸ್ತುತ ಮುಂಡಾಜೆ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಬಾಲ್ಯದಿಂದಲೇ ವಾಲಿಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಈ ಸಹೋದರ-ಸಹೋದರಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಕುಟುಂಬ ಹಾಗೂ ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಸಾಧಕ ಸಹೋದರ-ಸಹೋದರಿಯ ಸಾಧನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೆಚ್ಚುಗೆ ವ್ಯಕ್ತಪಡಿಸಿ, ತಾಲೂಕಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಬಂದಾರು ಹಾಗೂ ಮೊಗ್ರು ಗ್ರಾಮದ ಗ್ರಾಮಸ್ಥರು ಕೂಡ ಇಬ್ಬರ ಸಾಧನೆಯನ್ನು ಶ್ಲಾಘಿಸಿ, ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಯಶಸ್ಸು ಗಳಿಸುವಂತೆ ಶುಭ ಹಾರೈಸಿದ್ದಾರೆ.





