Breaking
20 Oct 2026, Tue

₹35 ಕೋಟಿ ಮೌಲ್ಯದ ಕ್ಯಾನ್ಸರ್ ಚಿಕಿತ್ಸಾ ಉಪಕರಣಗಳಿಗೆ ಬಿಪಿಎಲ್ ಕುಟುಂಬಗಳಿಂದ ಆಯುಧ ಪೂಜೆ

ಮಂಗಳೂರು: ಬಡ ರೋಗಿಗಳಿಗೂ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ದೊರೆಯಬೇಕು ಎಂಬ ಸಂದೇಶದೊಂದಿಗೆ, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂಐಒ) ಆಸ್ಪತ್ರೆಯಲ್ಲಿ ನಡೆದ ಆಯುಧ ಪೂಜೆ ವಿಶೇಷ ಗಮನ ಸೆಳೆಯಿತು. ಆಸ್ಪತ್ರೆಯ ನೂತನ ವೈದ್ಯಕೀಯ ಉಪಕರಣಗಳಿಗೆ ಇಬ್ಬರು ಬಿಪಿಎಲ್ ಕುಟುಂಬಗಳ ಸದಸ್ಯರು ಪೂಜೆ ಸಲ್ಲಿಸಿದ್ದು, ಈ ಮೂಲಕ ಬಡ ರೋಗಿಗಳಿಗೆ ಗೌರವ ಮತ್ತು ಘನತೆ ನೀಡುವ ವಿಶಿಷ್ಟ ಪ್ರಯತ್ನಕ್ಕೆ ಸಾಕ್ಷಿಯಾಯಿತು.


ಆಸ್ಪತ್ರೆಯಲ್ಲಿ ₹25 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಟ್ರೂಬೀಮ್ ರೇಡಿಯೊಥೆರಪಿ ವ್ಯವಸ್ಥೆ ಹಾಗೂ ₹10 ಕೋಟಿ ವೆಚ್ಚದಲ್ಲಿ ಪಿಇಟಿ-ಸಿಟಿ ಸ್ಕ್ಯಾನರ್ ಅಳವಡಿಸಲಾಗಿದೆ. ಒಟ್ಟು ₹35 ಕೋಟಿ ಹೂಡಿಕೆಯೊಂದಿಗೆ ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಲಾಗಿದೆ.
ಎಂಐಒ ವೈದ್ಯಕೀಯ ಮತ್ತು ಆಡಳಿತ ವಿಭಾಗದ ನಿರ್ದೇಶಕ ಡಾ. ಸುರೇಶ್ ರಾವ್ ಅವರ ನೇತೃತ್ವದಲ್ಲಿ ಈ ವಿಶಿಷ್ಟ ಉಪಕ್ರಮ ಹಮ್ಮಿಕೊಳ್ಳಲಾಯಿತು. ರೋಗಿಯ ಆರ್ಥಿಕ ಸ್ಥಿತಿಗತಿಗಳು ಅವರ ಗೌರವವನ್ನು ನಿರ್ಧರಿಸಬಾರದು ಹಾಗೂ ಹಣಕಾಸಿನ ಸಂಕಷ್ಟಗಳು ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆಗೆ ಅಡ್ಡಿಯಾಗಬಾರದು ಎಂಬ ಆಶಯದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಸಾಮಾನ್ಯವಾಗಿ ಆಯುಧ ಪೂಜೆಯ ಸಂದರ್ಭದಲ್ಲಿ ಉಪಕರಣಗಳಿಗೆ ಪೂಜೆ ಸಲ್ಲಿಸಿ ಶುಭ ಹಾರೈಸಲಾಗುತ್ತದೆ. ಎಂಐಒದಲ್ಲಿ ಜೀವ ಉಳಿಸುವ, ನೋವು ನಿವಾರಿಸುವ ಹಾಗೂ ಕ್ಯಾನ್ಸರ್ ರೋಗಿಗಳಲ್ಲಿ ಭರವಸೆ ಮೂಡಿಸುವ ಉದ್ದೇಶದಿಂದ ಅಳವಡಿಸಲಾದ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳಿಗೆ ಪೂಜೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ರಶ್ಮಿ ಮತ್ತು ಪ್ರದೀಪ್ ಕುಮಾರ್ ಹಾಗೂ ಸವಿತಾ ಮತ್ತು ಲಕ್ಷ್ಮಣ್ ಗೌಡ ಅವರ ಕುಟುಂಬಗಳು ಆಸ್ಪತ್ರೆಯನ್ನು ಪ್ರತಿನಿಧಿಸಿ ಪೂಜೆಯಲ್ಲಿ ಪಾಲ್ಗೊಂಡವು. ಆಸ್ಪತ್ರೆಯ ಮಾಲೀಕರು, ನಿರ್ದೇಶಕರು ಅಥವಾ ಹಿರಿಯ ವೈದ್ಯರ ಬದಲಿಗೆ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ಪೂಜೆಯ ಗೌರವ ನೀಡಿರುವುದು ಕಾರ್ಯಕ್ರಮದ ವಿಶೇಷವಾಗಿತ್ತು.


ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರಿಗೆ ಆಧುನಿಕ, ಕೈಗೆಟುಕುವ ಹಾಗೂ ಮಾನವೀಯತೆಯಿಂದ ಕೂಡಿದ ಕ್ಯಾನ್ಸರ್ ಚಿಕಿತ್ಸೆಯನ್ನು ಒದಗಿಸುವ ಬದ್ಧತೆಯನ್ನು ಈ ಕಾರ್ಯಕ್ರಮ ಮತ್ತೊಮ್ಮೆ ಸಾರಿದೆ ಎಂದು ಎಂಐಒ ತಿಳಿಸಿದೆ.

Leave a Reply

Your email address will not be published. Required fields are marked *