ಮಂಗಳೂರು: ಎಂಆರ್ ಪಿಎಲ್ ನಲ್ಲಿ ಸೆಪ್ಟೆಂಬರ್ 30ರಂದು ಸಂಭವಿಸಿದ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುತ್ತಿಗೆ ಕಾರ್ಮಿಕ ರಾಜೇಶ್ ಬ್ಯಾಪ್ಟಿಸ್ಟ್ (38) ಶನಿವಾರ ಮೃತಪಟ್ಟಿದ್ದಾರೆ.

ಸ್ಫೋಟ ಸಂಭವಿಸಿದ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಜೇಶ್ ಅವರು ಶೇ. 35ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ 18 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಸುರತ್ಕಲ್ನ ಇಡ್ಯಾ ಗ್ರಾಮದ ಕಾನ ನಿವಾಸಿಯಾಗಿದ್ದ ರಾಜೇಶ್ ಡಿ’ಸಿಲ್ವ ಅವರು ಹಲವು ವರ್ಷಗಳಿಂದ ಎಂಆರ್ಪಿಎಲ್ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಅವಿವಾಹಿತರಾಗಿದ್ದರು.
ಸೆಪ್ಟೆಂಬರ್ 30ರಂದು ಎಂಆರ್ಪಿಎಲ್ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕೇರ ಸ್ಥಳದಲ್ಲೇ ಸುಟ್ಟು ಮೃತಪಟ್ಟಿದ್ದರು. ಇದೀಗ ರಾಜೇಶ್ ಅವರ ಸಾವಿನೊಂದಿಗೆ ಈ ಘಟನೆಯಲ್ಲಿ ಮೃತಪಟ್ಟ ಕಾರ್ಮಿಕರ ಸಂಖ್ಯೆ ಎರಡಕ್ಕೇರಿದೆ.



