Breaking
16 Oct 2026, Fri

ದೊಡ್ಡಬಳ್ಳಾಪುರ: ಹಾಸ್ಟೆಲ್‌ನ 6ನೇ ಮಹಡಿಯಿಂದ ಬಿದ್ದು 20 ವರ್ಷದ ವಿದ್ಯಾರ್ಥಿನಿ ಸಾವು

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಸಮೀಪದ ವಿಶ್ವವಿದ್ಯಾಲಯದ ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಶುಕ್ರವಾರ ವರದಿಯಾಗಿದೆ.

ಮೃತ ವಿದ್ಯಾರ್ಥಿನಿಯನ್ನು ಆಂಧ್ರಪ್ರದೇಶದ ಗುಂತಕಲ್ ಮೂಲದ ವರ್ಷಿತಾ (20) ಎಂದು ಗುರುತಿಸಲಾಗಿದೆ. ಮೃತ್ಯುವಿಗೂ ಮುನ್ನ ವರ್ಷಿತಾ ತನ್ನ ಮೊಬೈಲ್‌ನಿಂದ ಪೋಷಕರಿಗೆ ‘ಐ ಲವ್ ಯೂ ಡ್ಯಾಡ್, ಐ ಲವ್ ಯೂ ಮಾಮ್’ ಎಂಬ ಸಂದೇಶ ಕಳುಹಿಸಿದ್ದಳು ಎನ್ನಲಾಗಿದೆ.

ಕಳೆದ ಕೆಲವು ದಿನಗಳಿಂದ ವರ್ಷಿತಾ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಕಳೆದ ಎರಡು ದಿನಗಳಿಂದ ಆಹಾರ ಸೇವಿಸಿರಲಿಲ್ಲ ಎನ್ನಲಾಗಿದೆ.ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಾವಿನ ಹಿಂದಿನ ಕಾರಣ ತಿಳಿಯಲು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *