Breaking
28 Nov 2026, Sat

ಕಾಫಿ ತೋಟದ ಮಾಲಕನ ಪುತ್ರನಿಂದ ವಲಸೆ ಕಾರ್ಮಿಕರ ಮೇಲೆ ಹಲ್ಲೆ ಆರೋಪ: ಬಂದೂಕು, ದೊಣ್ಣೆ ಹಿಡಿದು ಹಲ್ಲೆ ನಡೆಸಿದ ದೃಶ್ಯ ಸೆರೆ

ಚಿಕ್ಕಮಗಳೂರು: ಕಾಫಿ ತೋಟದ ಮಾಲಕನ ಪುತ್ರನೊಬ್ಬ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಆರೋಪ ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಸಗೋಡು ಗ್ರಾಮದಲ್ಲಿ ಕೇಳಿಬಂದಿದೆ.

ತಮಿಳುನಾಡಿನಿಂದ ಕೆಲಸಕ್ಕಾಗಿ ಬಂದಿದ್ದ ಕಾರ್ಮಿಕರು ಶುಕ್ರವಾರ ಸಂಜೆ ತಮ್ಮ ಊರಿಗೆ ಮರಳಲು ಸಿದ್ಧರಾಗುತ್ತಿದ್ದ ವೇಳೆ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ಆರೋಪಿಯು ಒಂದು ಕೈಯಲ್ಲಿ ಬಂದೂಕು ಹಾಗೂ ಮತ್ತೊಂದು ಕೈಯಲ್ಲಿ ದೊಣ್ಣೆ ಹಿಡಿದು ಪುರುಷ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಮಹಿಳಾ ಕಾರ್ಮಿಕೆಯ ಮೇಲೂ ಹಲ್ಲೆ ನಡೆಸಿದ್ದು, ಆಕೆ ಕೆಳಗೆ ಬಿದ್ದು ಒದ್ದಾಡುತ್ತಿದ್ದರೂ ಹಲ್ಲೆ ಮುಂದುವರಿಸಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಈ ವೇಳೆ ಸಾವಿರಾರು ಜನರಿಗೆ ಕೆಲಸ ನೀಡುವ ಸಾಹುಕಾರನಿಗೆ ಚಪ್ಪಲಿ ತೋರಿಸುತ್ತೀರಾ ಎಂದು ಅವಾಚ್ಯವಾಗಿ ನಿಂದಿಸಿರುವುದಾಗಿಯೂ ಆರೋಪಿಸಲಾಗಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಾರ್ಮಿಕರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *