Breaking
28 Nov 2026, Sat

ಮದ್ಯದ ಮತ್ತಿನಲ್ಲಿ ಫಾರ್ಚುನರ್ ಕಾರು ಚಾಲನೆ: ಆಲ್ಟೋ ಕಾರಿಗೆ ಡಿಕ್ಕಿ, ಕಣ್ಣೂರು ಮೂಲದ ಯುವಕ ಸಾವು

ಮಂಗಳೂರು: ಮದ್ಯದ ಮತ್ತಿನಲ್ಲಿ ಅತಿ ವೇಗವಾಗಿ ಫಾರ್ಚುನರ್ ಕಾರು ಚಲಾಯಿಸಿ, ರಸ್ತೆ ಬದಿ ನಿಲ್ಲಿಸಿದ್ದ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಕೇರಳದ ಕಣ್ಣೂರು ಮೂಲದ ಯುವಕ ಮೃತಪಟ್ಟ ಘಟನೆ ಮಂಗಳೂರಿನ ಉರ್ವ ಮೈದಾನ ಬಳಿಯ ಗಾಂಧಿನಗರ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ರಾತ್ರಿ ಸುಮಾರು 9 ಗಂಟೆ ವೇಳೆಗೆ ಈ ಭೀಕರ ಅಪಘಾತ ಸಂಭವಿಸಿದೆ. ಗಾಂಧಿನಗರ ಸರ್ಕಾರಿ ಶಾಲೆಯ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಆಲ್ಟೋ ಕಾರಿನಲ್ಲಿ ಕಣ್ಣೂರು ಮೂಲದ ಜಿತೇಂದ್ರ (41) ಎಂಬವರು ಕುಳಿತಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ಫಾರ್ಚುನರ್ ಕಾರು ಆಲ್ಟೋಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಬಳಿಕ ಫಾರ್ಚುನರ್ ಕಾರು ಮರ ಹಾಗೂ ಕಾಂಪೌಂಡ್ ಗೋಡೆಗೆ ಬಡಿದು ನಿಂತಿದೆ.


ಅಪಘಾತದ ತೀವ್ರತೆಗೆ ಆಲ್ಟೋ ಕಾರು ಮೇಲಕ್ಕೆ ಚಿಮ್ಮಿ ಕಾಂಪೌಂಡ್ ಗೋಡೆಯ ಎಡೆಯಲ್ಲೇ ಸಿಲುಕಿಕೊಂಡಿದೆ. ಕಾರಿನಲ್ಲಿದ್ದ ಜಿತೇಂದ್ರ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಮೃತಪಟ್ಟಿದ್ದಾರೆ.
ಜಿತೇಂದ್ರ ಅವರು ಇಬ್ಬರು ಸ್ನೇಹಿತರೊಂದಿಗೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರಿಗೆ ಬಂದಿದ್ದರು. ಶುಕ್ರವಾರ ಸಂಜೆ ಉರ್ವಾದ ಕೊರಗಜ್ಜನ ಕಟ್ಟೆಗೆ ನಮಿಸಲು ತೆರಳಿದ್ದರು. ಆಲ್ಟೋ ಕಾರು ಅವರ ಸ್ನೇಹಿತ ಶರತ್ ಅವರಿಗೆ ಸೇರಿದ್ದಾಗಿದ್ದು, ಶರತ್ ಚಾರ್ಜರ್ ಖರೀದಿಸಲು ಕಾರಿನಿಂದ ಇಳಿದು ಪಕ್ಕದ ಮೊಬೈಲ್ ಅಂಗಡಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಫಾರ್ಚುನರ್ ಕಾರು ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.


ಮೃತ ಜಿತೇಂದ್ರ ಬೆಂಗಳೂರಿನ ಎಸ್ಬಿಐ ಬ್ಯಾಂಕ್ ಕಚೇರಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ರಜೆಯಲ್ಲಿ ಸ್ನೇಹಿತರೊಂದಿಗೆ ಮಂಗಳೂರಿಗೆ ಬಂದಿದ್ದರು.
ಫಾರ್ಚುನರ್ ಕಾರು ರಥಬೀದಿಯ ಬುಕ್ ಕಂಪನಿಗೆ ಸೇರಿದ್ದು ಎನ್ನಲಾಗಿದ್ದು, ಕಾರಿನಲ್ಲಿದ್ದ ವ್ಯಕ್ತಿಯನ್ನು ಯಾರು, ಎಲ್ಲಿಗೆ ಕರೆದೊಯ್ದಿದ್ದಾರೆ ಹಾಗೂ ಅವರಿಗೆ ಗಾಯಗಳಾಗಿವೆಯೇ ಎಂಬ ಮಾಹಿತಿ ತಿಳಿದಿಲ್ಲ ಎಂದು ಪಾಂಡೇಶ್ವರ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಬಳಿಕ ಫಾರ್ಚುನರ್ ಕಾರು ಸ್ಥಳದಲ್ಲೇ ಜಖಂಗೊಂಡ ಸ್ಥಿತಿಯಲ್ಲಿ ಬಿದ್ದಿದ್ದು, ಅದನ್ನು ತೆರವುಗೊಳಿಸಲು ಯಾರೂ ಬಂದಿಲ್ಲ ಎನ್ನಲಾಗಿದೆ.
ಮದ್ಯಪಾನ ಮಾಡಿ ವಾಹನ ಚಲಾಯಿಸಿ ವ್ಯಕ್ತಿಯ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *