Breaking
27 Nov 2026, Fri

ಬೋಳೂರು–ಬೆಂಗ್ರೆ ಸೇತುವೆ ಕಾಮಗಾರಿ ವೇಳೆ ಅವಘಡ: ನದಿಗೆ ಬಿದ್ದ ಕ್ರೇನ್, ಬೋಟ್ ಜಖಂ; ಇಬ್ಬರು ಕಾರ್ಮಿಕರಿಗೆ ಗಾಯ

ಮಂಗಳೂರು: ಬೋಳೂರಿನ ಮೀನುಗಾರಿಕಾ ದಕ್ಕೆ ಬಳಿಯಿಂದ ತಣ್ಣೀರುಬಾವಿ–ಬೆಂಗ್ರೆ ಕಡೆಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಕಾಂಕ್ರೀಟ್ ಸ್ಲ್ಯಾಬ್ ಜಾರಿ ನದಿಗೆ ಬಿದ್ದ ಘಟನೆ ನಡೆದಿದೆ. ಈ ವೇಳೆ ಕ್ರೇನ್ ಸಹಿತ ಸ್ಲ್ಯಾಬ್ ನದಿಗೆ ಬಿದ್ದಿದ್ದು, ಕೆಳಗೆ ನಿಲ್ಲಿಸಿದ್ದ ಮೀನುಗಾರಿಕಾ ಬೋಟ್ ಜಖಂಗೊಂಡಿದೆ. ಸ್ಥಳದಲ್ಲಿದ್ದ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.


ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಮುಗ್ರೋಡಿ ಕನ್ಸ್ಟ್ರಕ್ಷನ್ ಸಂಸ್ಥೆ ಕಾಮಗಾರಿ ನಿರ್ವಹಿಸುತ್ತಿದೆ. ಸೇತುವೆ ನಿರ್ಮಾಣಕ್ಕಾಗಿ ಪಿಲ್ಲರ್ಗಳನ್ನು ಅಳವಡಿಸಲಾಗಿದ್ದು, ಅವುಗಳ ಮೇಲ್ಭಾಗದಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಜೋಡಿಸುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಆಯತಪ್ಪಿ ಸ್ಲ್ಯಾಬ್ ಜಾರಿದ್ದು, ಕ್ರೇನ್ ಸಹಿತ ನದಿಗೆ ಬಿದ್ದಿದೆ.


ಹರೀಶ್ ಅವರಿಗೆ ಸೇರಿದ ಮೀನುಗಾರಿಕಾ ಬೋಟ್ನ್ನು ಸೇತುವೆಯ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಬೋಟ್ನಲ್ಲಿ ಯಾವುದೇ ಕಾರ್ಮಿಕರು ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಘಟನೆಯಲ್ಲಿ ಗಾಯಗೊಂಡ ಇಬ್ಬರು ಕ್ರೇನ್ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


ಬೋಳೂರು ಕಡೆಯಿಂದ ಬೆಂಗ್ರೆ–ತಣ್ಣೀರುಬಾವಿ ಕಡೆಗೆ ನೇರ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಸೇತುವೆ ನಿರ್ಮಿಸಲಾಗುತ್ತಿದೆ. ಸೇತುವೆ ಪೂರ್ಣಗೊಂಡರೆ ತಣ್ಣೀರುಬಾವಿಗೆ ಕುಳೂರು ಮೂಲಕ ಸುತ್ತುಬಳಸಿ ತೆರಳುವ ಅನಿವಾರ್ಯತೆ ತಪ್ಪಲಿದೆ. ಈ ಸೇತುವೆಯ ಕಾಮಗಾರಿ ಇದೇ ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *