Breaking
27 Nov 2026, Fri

ಪೆದಮಲೆ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಚಾಲನೆ: ‘ಭೂ ಪರಾಹ ಶಾಂತಿ, ಭೂಮಿ ಪೂಜೆ’

ಬಂಟ್ವಾಳ: ಇಲ್ಲಿನ ಅಮ್ಟಾಡಿ ಮತ್ತು ಕುರಿಯಾಳ ಸಹಿತ ಪಂಜಿಕಲ್ಲು ಗ್ರಾಮಗಳಿಗೆ ಸಂಬಂಧಿಸಿದಂತೆ ಸುಮಾರು 300 ವರ್ಷಗಳ ಹಿನ್ನೆಲೆ ಹೊಂದಿರುವ ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಳವು ಭಕ್ತರು ಮತ್ತು ದಾನಿಗಳ ನೆರವಿನಲ್ಲಿ ರೂ 6 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ ಶೆಟ್ಟಿ ಬಡಾಜೆ ಹೇಳಿದ್ದಾರೆ.


ಇಲ್ಲಿನ ಅಮ್ಟಾಡಿ ಗ್ರಾಮದ ಪೆದಮಲೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ನಿರ್ಮಾಣ ಪ್ರಯುಕ್ತ ಗುರುವಾರ ನಡೆದ ‘ಭೂ ಪರಾಹ ಶಾಂತಿ ಮತ್ತು ಭೂಮಿ ಪೂಜೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷೇತ್ರದ ತಂತ್ರಿ ಉದಯ ಪಾಂಗಣ್ಣಾಯರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಶ್ರೀಕೃಷ್ಣ ಅರಳಿತ್ತಾಯ ವಿವಿಧ ಪೂಜಾ ವಿಧಿ ವಿಧಾನ ನೆರವೇರಿಸಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಮಾತನಾಡಿ, ‘ ದೇವಳವು ಕಳೆದ 1997ರಲ್ಲಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದಿದ್ದು, ಬಳಿಕ 2009ರಲ್ಲಿ ಮತ್ತೆ ಕಲಶಾಭಿಷೇಕ ನಡೆದಿದೆ’ ಎಂದು ತಿಳಿಸಿದರು.


ಇದೇ ವೇಳೆ ಮೂರು ಗ್ರಾಮಗಳ ಅಪಾರ ಮಂದಿ ಭಕ್ತರು ತೆಂಗಿನ ಕಾಯಿ ಒಡೆದು ದೇವಳದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ಸಂಕಲ್ಪ ಕೈಗೊಂಡರು. ಶಿಲ್ಪಿ ಜೀವನ್ ಶೆಟ್ಟಿ ಪಿಳ್ಯ, ಮತ್ತು ಗುತ್ತಿಗೆದಾರ ಟಿ.ತಾರನಾಥ ಕೊಟ್ಟಾರಿ ಇವರಿಗೆ ಸಾಂಪ್ರದಾಯಿಕ ವೀಳ್ಯ ನೀಡಲಾಯಿತು.


ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಪಯ್ಯಡೆ ಕುರ್ಯಾಳಗುತ್ತು ಶುಭ ಹಾರೈಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕರುಣೇಂದ್ರ ಪೂಜಾರಿ ಕೊಂಬರಬೈಲು, ಮಲ್ಲಿಕಾ ಶೆಟ್ಟಿ ಅಮ್ಟಾಡಿ, ರಾಮಚಂದ್ರ ಕಾಯರ್ ಮಾರ್, ಕೇಶವ ಅಮೀನ್, ಸುಮಿತ್, ನಳಿನಿ ಕೋಟ್ಯಾನ್, ಮಾಜಿ ಸದಸ್ಯರಾದ ಸುರೇಂದ್ರ ಪೂಜಾರಿ, ಹರೀಶ್ ಶೆಟ್ಟಿ ಪಡು, ಯುವಕ ಸಂಘದ ಅಧ್ಯಕ್ಷ ಹರೀಶ ಪೂಜಾರಿ, ಪ್ರಮುಖರಾದ ಶ್ರೀಪತಿ ಭಟ್ ಪುಂಚೋಡಿ, ದಯಾನಂದ ಶೆಟ್ಟಿ ಬಡಾಜೆ, ನರಸಿಂಹ ಹೊಳ್ಳ, ಪುಷ್ಪರಾಜ ಶೆಟ್ಟಿ ಬಡಾಜೆ, ಪ್ರಕಾಶ್ ಕುಮಾರ್ ಜೈನ್, ಕೃಷ್ಣರಾಜ್ ಜೈನ್, ಗಂಗಾಧರ ಪೂಜಾರಿ ಅಮೈ, ಅವಿಲ್ ಮಿನೇಜಸ್, ವಿಜಯ ಫೆರ್ನಾಂಡಿಸ್, ಲೋಕೇಶ್ ಸುವರ್ಣ, ಯತೀಶ್ ಕರ್ಕೇರ, ರಾಮಚಂದ್ರ ಶೆಟ್ಟಿಗಾರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *