ನವದೆಹಲಿ: ವಿದ್ಯುತ್ ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಶುಲ್ಕ ವಿಧಿಸುವ ಉದ್ದೇಶದಿಂದ ಕೇಂದ್ರ ವಿದ್ಯುತ್ ಸಚಿವಾಲಯವು ‘ಟೈಮ್ ಆಫ್ ದಿ ಡೇ’ (ದಿನದ ಅವಧಿ) ದರ ನಿಗದಿ ನಿಯಮಾವಳಿಯನ್ನು ಜಾರಿಗೆ ತರಲು ಮುಂದಾಗಿದೆ. ಈ ನಿಯಮದಂತೆ ಗ್ರಾಹಕರು ದಿನದ ಯಾವ ಅವಧಿಯಲ್ಲಿ ವಿದ್ಯುತ್ ಬಳಸುತ್ತಾರೆ ಎಂಬುದರ ಆಧಾರದ ಮೇಲೆ ವಿದ್ಯುತ್ ಶುಲ್ಕದಲ್ಲಿ ವ್ಯತ್ಯಾಸವಾಗಲಿದೆ.

ಹೊಸ ನಿಯಮದ ಪ್ರಕಾರ, ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ದಿನದ ವಿವಿಧ ಅವಧಿಗಳನ್ನು ಸ್ಲಾಟ್ಗಳಾಗಿ ವಿಂಗಡಿಸಿ, ಪ್ರತಿ ಅವಧಿಗೂ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗುತ್ತದೆ. ಇದರಿಂದ ರಾತ್ರಿ ವೇಳೆ ಬಳಸುವ ವಿದ್ಯುತ್ ಹಾಗೂ ಹಗಲಿನ ಅವಧಿಯಲ್ಲಿ ಬಳಸುವ ವಿದ್ಯುತ್ಗೆ ವಿಧಿಸುವ ಶುಲ್ಕದಲ್ಲಿ ವ್ಯತ್ಯಾಸವಿರಲಿದೆ.
ವಿದ್ಯುತ್ ಬೇಡಿಕೆ ಹೆಚ್ಚಿರುವ ಅವಧಿಯಲ್ಲಿ ಬಳಕೆಗೆ ಹೆಚ್ಚಿನ ಶುಲ್ಕ ಹಾಗೂ ಬೇಡಿಕೆ ಕಡಿಮೆ ಇರುವ ಅವಧಿಯಲ್ಲಿ ಬಳಕೆಗೆ ಕಡಿಮೆ ಶುಲ್ಕ ವಿಧಿಸಲು ಈ ನಿಯಮ ಅವಕಾಶ ಕಲ್ಪಿಸಲಿದೆ.

ಈ ಕುರಿತು ಕರಡು ನಿಯಮಾವಳಿ ಸಿದ್ಧವಾಗಿದ್ದು, 2027ರ ಏಪ್ರಿಲ್ 1ರಿಂದ ಅನುಷ್ಠಾನಕ್ಕೆ ಬರಲಿದೆ. 2029ರ ಏಪ್ರಿಲ್ ವೇಳೆಗೆ ಬಹುತೇಕ ಎಲ್ಲ ಗ್ರಾಹಕರನ್ನು ಈ ನಿಯಮದ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಗುರಿ ಹೊಂದಿದೆ.

ಆರಂಭಿಕ ಹಂತದಲ್ಲಿ 10 ಕಿಲೋವ್ಯಾಟ್ಗಿಂತ ಹೆಚ್ಚು ಗರಿಷ್ಠ ವಿದ್ಯುತ್ ಬೇಡಿಕೆ ಹೊಂದಿರುವ ಗ್ರಾಹಕರನ್ನು ಈ ನಿಯಮದಡಿ ತರಲು ಉದ್ದೇಶಿಸಲಾಗಿದೆ. ಈ ಪ್ರಕ್ರಿಯೆಯನ್ನು 2028ರ ಏಪ್ರಿಲ್ 1ರೊಳಗೆ ಪೂರ್ಣಗೊಳಿಸುವ ಗುರಿ ಇದೆ. ಉಳಿದ ಗ್ರಾಹಕರನ್ನು 2029ರ ಏಪ್ರಿಲ್ 1ರೊಳಗೆ ನಿಯಮದ ವ್ಯಾಪ್ತಿಗೆ ತರಲಾಗುತ್ತದೆ.
ಆದರೆ, ಕೃಷಿ ವಿದ್ಯುತ್ ಗ್ರಾಹಕರನ್ನು ಈ ನಿಯಮದಿಂದ ಹೊರಗಿಡಲಾಗಿದೆ.





