ಅಂಡಾರು: ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಮರಕ್ಕೆ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ಅಂಡಾರು ಕೊಂದಲ್ಕೆ ಎಂಬಲ್ಲಿ ಶನಿವಾರ (ನ.21) ಸಂಭವಿಸಿದೆ.

ಅಪಘಾತದಲ್ಲಿ ಕಡ್ತಲ ನಿವಾಸಿ ಸೀತಾರಾಮ ರೈ (60) ಮೃತಪಟ್ಟಿದ್ದಾರೆ. ವಾಹನದಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಅಂಡಾರು ಕೊಂದಲಿಕೆ ಪರಿಸರದ ವಸಂತಿ, ಲೀಲಾವತಿ, ಶಾಲಿನಿ, ಶೋಭಾ ಹಾಗೂ ಪ್ರೇಮ ಎಂಬ ಐವರು ಗಾಯಗೊಂಡಿದ್ದು, ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಂಡಾರಿನಿಂದ ಕಾಡುಹೊಳೆ ಮಾರ್ಗವಾಗಿ ಕಡ್ತಲದ ಹಪ್ಪನಡ್ಕದ ಸದಾನಂದ ಶೆಟ್ಟಿ ಅವರ ಅಡಿಕೆ ತೋಟದ ಕೆಲಸಕ್ಕೆ ಕಾರ್ಮಿಕರನ್ನು ಕರೆದೊಯ್ಯಲು ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ವಾಹನ ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ಹೃದಯಾಘಾತವಾಗಿರಬಹುದು. ಇದರಿಂದ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿಯಾಗಿರಬಹುದೆಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಅಜೆಕಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




