ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಕಳವಾದ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಮಾರೆನಹಳ್ಳಿ ನಿವಾಸಿ ಮನೀಶ್ ಎ. ಬಂಧಿತ ಆರೋಪಿಯಾಗಿದ್ದಾನೆ.

ಅ.20ರಂದು ಆರ್‌ಎಸ್‌ಬಿ ಸಭಾಭವನದ ಸಮೀಪದ ಶೆಡ್‌ನಲ್ಲಿ ಬೈಕ್ ನಿಲ್ಲಿಸಿ ಮಾಲಕರು ಹುಬ್ಬಳ್ಳಿಗೆ ತೆರಳಿದ್ದರು. ಅ.22ರಂದು ಮರಳಿ ಬಂದು ನೋಡಿದಾಗ ಬೈಕ್ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನ.18ರಂದು ಮಣ್ಣಪಳ್ಳ ಕೆರೆ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು, ಅನುಮಾನಾಸ್ಪದವಾಗಿ ಬಂದ ಬೈಕ್ ಸವಾರನನ್ನು ತಡೆದು ಪರಿಶೀಲಿಸಿದಾಗ ಅದು ಕಳವಾದ ಬೈಕ್ ಎಂಬುದು ತಿಳಿದುಬಂದಿದೆ. ವಿಚಾರಣೆ ವೇಳೆ ಆರೋಪಿ ಬೈಕ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆತನನ್ನು ಬಂಧಿಸಿ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಅವರ ನಿರ್ದೇಶನದಲ್ಲಿ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಪಿಎಸ್‌ಐ ಶಂಭುಲಿಂಗಯ್ಯ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.




