ಬೆಳ್ತಂಗಡಿ: ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಆರೋಗ್ಯ ರಕ್ಷಣೆ ಹಾಗೂ ಅವರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸೇವಾಭಾರತಿ (ರಿ.) ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ 34ನೇ ವಸತಿಯುತ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರವನ್ನು ಆಯೋಜಿಸಲಾಗಿದೆ.

ಪ್ರಸನ್ನ ಕಾಲೇಜ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆ, ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಲಯನ್ಸ್ ಕ್ಲಬ್ ಬೆಳ್ತಂಗಡಿ ಇವುಗಳ ಸಹಯೋಗದಲ್ಲಿ ನವೆಂಬರ್ 19ರಂದು ಪ್ರಸನ್ನ ಕಾಲೇಜ್ ಆಫ್ ಆಯುರ್ವೇದ ಆಸ್ಪತ್ರೆಯಲ್ಲಿ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು.

ಪ್ರಸನ್ನ ಕಾಲೇಜ್ ಆಫ್ ಆಯುರ್ವೇದ ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಬಿ.ಕೆ. ಪ್ರಶಾಂತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾಲೇಜಿನ ವೈದ್ಯಕೀಯ ಅಧೀಕ್ಷಕರಾದ ಡಾ. ಪ್ರಸನ್ನ ಕಾಕುಂಜೆ ಅವರು ಮಾತನಾಡಿ, ಸೇವಾಧಾಮದ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗಾಗಿ ಸೇವಾಭಾರತಿ ಹಮ್ಮಿಕೊಂಡಿರುವ ಶಿಬಿರಕ್ಕೆ ಶುಭ ಹಾರೈಸಿದರು.

ಕನ್ಯಾಡಿ ಸೇವಾಭಾರತಿಯ ಅಧ್ಯಕ್ಷರು ಹಾಗೂ ಸೇವಾಧಾಮದ ಸಂಸ್ಥಾಪಕರಾದ ಕೆ. ವಿನಾಯಕ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ವಿವಿಧ ಸೇವಾ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಪ್ರಸನ್ನ ಆಯುರ್ವೇದ ಕಾಲೇಜಿನಲ್ಲಿ ಎರಡನೇ ಬಾರಿಗೆ ಉಚಿತ ಶಿಬಿರ ಆಯೋಜಿಸಲು ಸಹಕರಿಸಿದ ಕಾಲೇಜಿನ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯ ಸೇವಾ ಕಾರ್ಯಗಳಿಗೆ ಕೈಜೋಡಿಸುತ್ತಿರುವ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೊ. ಶ್ರೀಧರ್ ಕೆ.ವಿ. ಹಾಗೂ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಘುರಾಮ ಶೆಟ್ಟಿ ‘ಸಾಧನಾ’ ಉಪಸ್ಥಿತರಿದ್ದರು.

ಶಿಬಿರದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ 10 ಮಂದಿ ದಿವ್ಯಾಂಗರು ಭಾಗವಹಿಸಿದ್ದರು. ಸೇವಾಭಾರತಿಯ ಸಕ್ಸೆಸರ್ ಡಿಸಿಗ್ನೇಟ್ ಮೋಹನ್ ಎಸ್. ಸ್ವಾಗತಿಸಿದರು. ಸೇವಾಭಾರತಿಯ ಹಿರಿಯ ಪ್ರಬಂಧಕ ಚರಣ್ ಕುಮಾರ್ ಎಂ. ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕ್ಷೇತ್ರ ಸಂಯೋಜಕ ಧನೇಂದ್ರ ವಂದಿಸಿದರು.




