ಬಂಟ್ವಾಳ : ಭಗವಂತನು ಸೃಷ್ಟಿಸಿದ ಗಾಳಿ, ನೀರು, ಬೆಳಕುಗಳಿಗೆ ಜಾತಿ, ಧರ್ಮ, ವರ್ಣಗಳ ಭೇದವಿಲ್ಲ. ಅವು ಪ್ರಕೃತಿಯ ಎಲ್ಲ ಮಕ್ಕಳಿಗೂ ಸಮಾನವಾಗಿ ದೊರೆಯುತ್ತವೆ. ಹಾಗಿರುವಾಗ ದೇವರ ಸೃಷ್ಟಿಯಾದ ಮನುಷ್ಯರ ನಡುವೆ ಜಾತಿ, ಮತ, ಮೇಲು–ಕೀಳು, ಅಸ್ಪೃಶ್ಯತೆಯ ಗೋಡೆಗಳೇಕೆ? ಎಂಬ ಮೂಲಭೂತ ಪ್ರಶ್ನೆಯನ್ನು ಸಮಾಜದ ಮುಂದಿಟ್ಟವರು ಬ್ರಹ್ಮಶ್ರೀ ನಾರಾಯಣಗುರುಗಳು.

ಭಾರತವೆಂಬುದು ಕೇವಲ ಭೌಗೋಳಿಕ ಪ್ರದೇಶವಲ್ಲ; ಅದು ಜ್ಞಾನದ ಭೂಮಿ, ಆಧ್ಯಾತ್ಮದ ನೆಲೆ, ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಸಂಸ್ಕೃತಿಯ ತೊಟ್ಟಿಲು. ಸರ್ವಧರ್ಮಗಳನ್ನೂ ಗೌರವಿಸಿ, ಎಲ್ಲ ಧರ್ಮಗಳ ಸಾರದಲ್ಲಿರುವ ಮಾನವೀಯ ಮೌಲ್ಯಗಳನ್ನು ಪ್ರೀತಿಸುವ ವಿಶಾಲ ಮನೋಭಾವ ನಮ್ಮ ದೇಶದ ಸಂಸ್ಕೃತಿಯ ಹೆಗ್ಗಳಿಕೆ. ಇಂತಹ ಪುಣ್ಯಭೂಮಿಯಲ್ಲಿ ಮನುಷ್ಯರ ನಡುವೆ ಜಾತಿ–ಧರ್ಮದ ಹೆಸರಿನಲ್ಲಿ ತಾರತಮ್ಯ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆಗಳು ಬೇರೂರಿದ್ದ ಕಾಲಘಟ್ಟದಲ್ಲಿ ನಾರಾಯಣಗುರುಗಳು ಹೊಸ ಸಾಮಾಜಿಕ ಜಾಗೃತಿಯ ಬೆಳಕಾಗಿ ಉದಯಿಸಿದರು ಎಂದು ಭಜಕರು ಹಾಗೂ ಆಧ್ಯಾತ್ಮಿಕ ಚಿಂತಕರಾದ ರವಿ ಮಂಜನಾಡಿ ತಿಳಿಸಿದರು.

ಅವರು ನವೆಂಬರ್ 19 ಗುರುವಾರ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಪುರುಷೋತ್ತಮ ಪೂಜಾರಿ ಕಾರಾಜೆ ಅವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ–87ರಲ್ಲಿ ಗುರುಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ದ್ವಿತೀಯ ಉಪಾಧ್ಯಕ್ಷರಾದ ಹರೀಶ್ ಅಜೆಕಲ, ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ, ನಿರ್ದೇಶಕರಾದ ನವೀನ್ ಕಾರಾಜೆ, ಶೈಲೇಶ್ ಕುಚ್ಚಿ ಗುಡ್ಡೆ ಸದಸ್ಯರಾದ ಪ್ರಶಾಂತ್ ಏರಮಲೆ, ಯಶೋಧರ ಕಡಂಬಳಿಕೆ, ಯತೀಶ್ ಬೊಳ್ಳಾಯಿ, ನಾರಾಯಣ ಪೂಜಾರಿ ಪಲ್ಲಿಕಂಡ, ಪ್ರಶಾಂತ್ ಪೂಜಾರಿ ಬೊಳ್ಳಾಯಿ , ಭವಾನಿ ಕೆ, ಹಾಗೂ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ. ಶಿವಾನಂದ ಎಂ, ನಾಗೇಶ್ ಪೊನ್ನೋಡಿ, ರಾಜೇಶ್ ಸುವರ್ಣ, ಜಗದೀಶ್ ಕಾರಾಜೆ, ಅರುಣ್ ಕುಮಾರ್, ಭವ್ಯ ಪ್ರಜೀತ್ ಭಾಗವಹಿಸಿದ್ದರು. ಕಾರ್ಯಕ್ರಮದ ಭಜನಾ ಸಂಕೀರ್ತನೆಯಲ್ಲಿ ಸಾತ್ವಿಕ್ ದೇರಾಜೆ , ಕಾರ್ತಿಕ್ ದೇರಾಜೆ ಸಂಗೀತ ಸೇವೆ ನೀಡಿದರು.

ಆತಿಥ್ಯ ವಹಿಸಿದ ಪುರುಪೋತ್ತಮ ಪೂಜಾರಿ ಕಾರಾಜೆ ಇವರು ಆಗಮಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ವಂದಿಸಿದರು . ಘಟಕದ ಅಧ್ಯಕ್ಷರಾದ ಕಿರಣ್ ಪೂಂಜರಕೊಡಿ ಕಾರ್ಯಕ್ರಮ ನಿರೂಪಿಸಿದರು.



