Breaking
20 Nov 2026, Fri

ನಾಳೆ(ನ. 21) ಸಿದ್ಧಕಟ್ಟೆ–ಕೊಡಂಗೆ ‘ವೀರ–ವಿಕ್ರಮ’ ಜೋಡುಕರೆ ಕಂಬಳ ವೈಭವ

ಬಂಟ್ವಾಳ: ತುಳುನಾಡಿನ ಗ್ರಾಮೀಣ ಸಂಸ್ಕೃತಿ, ಪರಂಪರೆ ಹಾಗೂ ಕಂಬಳ ಕ್ರೀಡೆಯ ವೈಭವವನ್ನು ಸಾರುವ 4ನೇ ವರ್ಷದ ಸಿದ್ಧಕಟ್ಟೆ–ಕೊಡಂಗೆ ‘ವೀರ–ವಿಕ್ರಮ’ ಜೋಡುಕರೆ ಕಂಬಳವು ನವೆಂಬರ್ 21ರಂದು ಶನಿವಾರ ಸಿದ್ಧಕಟ್ಟೆ–ಕೊಡಂಗೆ ಕಂಬಳ ಗದ್ದೆಯಲ್ಲಿ ನಡೆಯಲಿದೆ.

ಪೂರ್ವಾಹ್ನ 8 ಗಂಟೆಗೆ ಕಂಬಳದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಕ್ಷೇತ್ರ ಪೂಂಜದ ಪ್ರಧಾನ ಅರ್ಚಕ ಶ್ರೀ ಪ್ರಕಾಶ್ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಪೂಂಜದ ಅಸ್ರಣ್ಣರಾದ ಶ್ರೀ ಕೃಷ್ಣಪ್ರಸಾದ್ ಆಚಾರ್ಯ ಅವರು ಕಂಬಳ ಧ್ವಜಾರೋಹಣ ನೆರವೇರಿಸಲಿದ್ದು, ಸಿದ್ಧಕಟ್ಟೆಯ ಪದ್ಮ ಕ್ಲಿನಿಕ್‌ನ ಡಾ. ಪ್ರಭಾಚಂದ್ರ ಜೈನ್ ಅವರು ಕಂಬಳ ಕರೆಯನ್ನು ಉದ್ಘಾಟಿಸಲಿದ್ದಾರೆ.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಗೌರವಾಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕನಿಲ ಕುಡುಂಬೂರುಗುತ್ತಿನ ಗುತ್ತಿನಾರ್ ಶ್ರೀ ಜಯರಾಮ ಶೆಟ್ಟಿ, ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಪ್ರವರ್ತಕ ಶ್ರೀ ಯುವರಾಜ್ ಜೈನ್, ಸಿದ್ಧಕಟ್ಟೆಯ ಅನಂತಪದ್ಮ ಆಸ್ಪತ್ರೆಯ ಡಾ. ಸುದೀಪ್ ಕುಮಾರ್, ಡಾ. ಕೃಷ್ಣಮೂರ್ತಿ ಹಾಗೂ ರೋಟರಿ ಜಿಲ್ಲಾ 3181ರ PDG ರೊ. ಪ್ರಕಾಶ್ ಕಾರಂತ್ ಭಾಗವಹಿಸಲಿದ್ದಾರೆ.

ಸಂಜೆ 7 ಗಂಟೆಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಚಿವ ಬಿ. ರಮಾನಾಥ ರೈ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಹಾಗೂ ಆರೋಗ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಯು.ಟಿ. ಖಾದರ್, ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರಿನ ಅಧ್ಯಕ್ಷ ಡಾ. ಪ್ರಭಾಕರ ಭಟ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮೂಡುಬಿದಿರೆ–ಮುಲ್ಕಿ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಉತ್ತರ ಶಾಸಕ ವೈ. ಭರತ್ ಶೆಟ್ಟಿ, ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಇದಲ್ಲದೆ ಕಂಬಳ ಕ್ಷೇತ್ರದ ಸಾಧಕರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿರಲಿದ್ದಾರೆ.

ಕಂಬಳವು ತುಳುನಾಡಿನ ಕೃಷಿ ಸಂಸ್ಕೃತಿ, ಜಾನಪದ ಪರಂಪರೆ ಮತ್ತು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದೆ. ಈ ವಿಶಿಷ್ಟ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಉಳಿಸಿ ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗಿರುವ ನಾಲ್ಕನೇ ವರ್ಷದ ‘ವೀರ–ವಿಕ್ರಮ’ ಜೋಡುಕರೆ ಕಂಬಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕಂಬಳ ಸಮಿತಿ ಮನವಿ ಮಾಡಿದೆ.

Leave a Reply

Your email address will not be published. Required fields are marked *