ಕಲ್ಲಡ್ಕ: ಬಂಟ್ವಾಳ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ.), ಜಾನ್ಸಿರಾಣಿ ಲಕ್ಷ್ಮೀಬಾಯಿ ಮಹಿಳಾ ಮಂಡಲ (ರಿ.) ಕಲ್ಲಡ್ಕ ಹಾಗೂ ಪ್ರಜ್ಯೋತಿ ಬಳಗ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಆಸಕ್ತರಿಗೆ ನೆರವು ಒಲವು’ ಕಾರ್ಯಕ್ರಮವು ನ. 24ರಂದು ಮಂಗಳವಾರ ಕಲ್ಲಡ್ಕದ ನೇತಾಜಿ ಯುವಕ ಮಂಡಲದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಮೀನಾಕ್ಷಿ ಆರ್. ಪೂಜಾರಿ ವಹಿಸಿದ್ದರು.

ಪ್ರಜ್ಯೋತಿ ಬಳಗದ ಸಂಸ್ಥಾಪಕರು ಹಾಗೂ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಚಂಚಲ ತೇಜೋಮಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಸ್ವತಃ ಉಳಿತಾಯ ಮಾಡಿ ಪ್ರಜ್ಯೋತಿ ಬಳಗವನ್ನು ಸ್ಥಾಪಿಸಿ, ಅಶಕ್ತರಿಗೆ ನೆರವು ನೀಡುವ ಉದ್ದೇಶದಿಂದ ಹಮ್ಮಿಕೊಳ್ಳುತ್ತಿರುವ ಮೂರನೇ ಕಾರ್ಯಕ್ರಮ ಇದಾಗಿದೆ. ಬಳಗ ಬೆಳೆದು ಬಂದ ಹಾದಿ ಹಾಗೂ ಮುಂದಿನ ಯೋಜನೆಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪ್ರಜ್ಯೋತಿ ಬಳಗದ ವತಿಯಿಂದ ಏಳು ಮಂದಿ ಆಸಕ್ತರಿಗೆ ಸಹಾಯಧನ ವಿತರಿಸಲಾಯಿತು. ಹತ್ತು ಮಂದಿ ಪೌರಕಾರ್ಮಿಕರಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.
ಸಹಕಾರ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಪದ್ಮನಾಭ ಕೊಟ್ಟಾರಿ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

ಮಾಜಿ ಶಾಸಕ ರುಕ್ಮಯ ಪೂಜಾರಿ ಮಾತನಾಡಿ, ಮಹಿಳೆಯರೇ ಸಂಘಟಿತರಾಗಿ ನಡೆಸುತ್ತಿರುವ ಸಾಮಾಜಿಕ ಚಿಂತನೆಯ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದ್ದು, ಇಂತಹ ಸೇವಾ ಕಾರ್ಯಗಳಿಗೆ ಹೆಚ್ಚಿನ ಮಹಿಳೆಯರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್, ಡಾ. ಕಮಲಾ ಪ್ರಭಾಕರ್ ಭಟ್, ಜಿಲ್ಲಾ ಮಹಿಳಾ ಮಂಡಲದ ಅಧ್ಯಕ್ಷೆ ಉಷಾ ನಾಯಕ್, ತಾಲೂಕು ಮಹಿಳಾ ಮಂಡಲದ ಅಧ್ಯಕ್ಷೆ ಧರ್ಮಾವತಿ, ಪ್ರಜ್ಯೋತಿ ಬಳಗದ ಮುಖ್ಯಸ್ಥೆ ಮನೋರಮ ಉಮೇಶನ್, ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷೆ ವಿದ್ಯಾ ಕೊಟ್ಟಾರಿ ಹಾಗೂ ತಾಲೂಕು ಒಕ್ಕೂಟದ ಗೌರವಾಧ್ಯಕ್ಷೆ ಹೇಮಲತಾ ಜೆ. ಸಾಲ್ಯಾನ್ ಉಪಸ್ಥಿತರಿದ್ದರು.

ವಿಜಯ ಪ್ರಕಾಶ್ ಪ್ರಾರ್ಥಿಸಿದರು. ಲಕಿತ ಆರ್. ಶೆಟ್ಟಿ ಸ್ವಾಗತಿಸಿದರು. ಹಿರಣ್ಮಯಿ ವಂದಿಸಿದರು. ಪ್ರಜ್ಯೋತಿ ಬಳಗದ ಸದಸ್ಯೆ ಹಾಗೂ ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


