ಮಾಣಿ: ತುಳಸಿ ಪೂಜೆ ಹಾಗೂ ಉತ್ಥಾನ ದ್ವಾದಶಿಯ ಆಚರಣೆಯು ಕೇವಲ ಧಾರ್ಮಿಕ ವಿಧಿವಿಧಾನವಲ್ಲ. ಅದು ಭಕ್ತಿ, ಪ್ರಕೃತಿ ಆರಾಧನೆ ಮತ್ತು ಬದುಕಿನ ಉನ್ನತ ಮೌಲ್ಯಗಳನ್ನು ಪರಸ್ಪರ ಬೆಸೆಯುವ ಪವಿತ್ರ ಸಂಪ್ರದಾಯವಾಗಿದೆ ಎಂದು ಪ್ರಧಾನ ಚಿಂತಕ ರಮೇಶ್ ಉಳಯ ಅಭಿಪ್ರಾಯಪಟ್ಟರು.
ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಬಾಕಿಲದ ‘ಶ್ರೀ ಸಾಯಿದುರ್ಗಾ ನಿಲಯ’ದಲ್ಲಿ ಆಯೋಜಿಸಲಾದ ‘ತುಳಸಿ ವೈಭವ’ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಕೆಎಸ್ಆರ್ಟಿಸಿ ಕುಶಲಕರ್ಮಿ ಸುನಿಲ್ ಕುಮಾರ್ ಬಿ.ಕೆ. ಮಾತನಾಡಿ, ಹಿರಿಯರು ಹಾಕಿಕೊಟ್ಟ ಆಚಾರ-ವಿಚಾರ ಹಾಗೂ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಯುವವಾಹಿನಿ ಘಟಕವು ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಯುವವಾಹಿನಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸುರೇಶ್ ಶಾಂತಿ ಅವರ ಪೌರೋಹಿತ್ಯದಲ್ಲಿ ವಿಧಿವತ್ತಾಗಿ ತುಳಸಿ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೆ ಆತಿಥ್ಯ ವಹಿಸಿದ್ದ ಪುರುಷೋತ್ತಮ ದಂಪತಿಯನ್ನು ಘಟಕದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಆಂಬುಲೆನ್ಸ್ ಸೇವಾರ್ಥವಾಗಿ ಆಯೋಜಿಸಲಾಗಿದ್ದ ಲಕ್ಕಿ ಡಿಪ್ ಡ್ರಾ ಪ್ರಕ್ರಿಯೆಯೂ ಇದೇ ಸಂದರ್ಭದಲ್ಲಿ ನಡೆಯಿತು.

ವೇದಿಕೆಯಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಮಾಣಿ ಶ್ರೀ ನಾರಾಯಣ ಗುರು ಸಹಕಾರ ಸಂಘ (ನಿ.)ದ ಅಧ್ಯಕ್ಷ ನಾರಾಯಣ ಸಾಲಿಯಾನ್, ಕಾರ್ಯಕ್ರಮದ ಸಂಚಾಲಕ ಸುಜಿತ್ ಪೂಜಾರಿ ಬಾಕಿಲ, ಮೋಹನ್ ಪೂಜಾರಿ ಮುಜಲ ಹಾಗೂ ಲೋಕನಾಥ ತಿಮರಾಜೆ ಉಪಸ್ಥಿತರಿದ್ದರು.

ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕ ಹರೀಶ್ ಬಾಕಿಲ, ಮಾಜಿ ಅಧ್ಯಕ್ಷರಾದ ರಾಜೇಶ್ ಪೂಜಾರಿ ಬಾಬನಕಟ್ಟೆ, ರಮೇಶ್ ಪೂಜಾರಿ ಮುಜಲ, ಜಯಂತ ಬರಿಮಾರು, ನಾಗೇಶ್ ಕೊಂಕಣಪದವು, ಶಿವರಾಜ್ ಪಿ.ಆರ್., ಘಟಕದ ಪ್ರಥಮ ಉಪಾಧ್ಯಕ್ಷ ಸುಜಿತ್ ಅಂಚನ್ ಸೇರಿದಂತೆ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ ಸ್ವಾಗತಿಸಿದರು. ಕಾರ್ಯದರ್ಶಿ ವಿಶ್ವನಾಥ ಪೂಜಾರಿ ವಂದಿಸಿದರು. ಪ್ರಶಾಂತ್ ಬಿ. ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.



