ಪುತ್ತೂರು: ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದು, ತಂತಿಗಳು ಕಾರಿನ ಮೇಲೆ ಬಿದ್ದರೂ ಚಾಲಕ ಸೇರಿದಂತೆ ಮೂವರು ಯಾವುದೇ ಗಾಯಗಳಿಲ್ಲದೆ ಪಾರಾದ ಘಟನೆ ಬುಧವಾರ(ನ.04) ನೆಲ್ಯಾಡಿ ಸಮೀಪದ ದೊಂತಿಲದಲ್ಲಿ ನಡೆದಿದೆ.

ಬಲ್ಯ ನಿವಾಸಿ ಸುಂದರ್ ಆಳ್ವ ಅವರು ಚಲಾಯಿಸುತ್ತಿದ್ದ ಕಾರು ನೆಲ್ಯಾಡಿಯಿಂದ ಬಲ್ಯ ಕಡೆಗೆ ನೆಲ್ಯಾಡಿ-ಬಲ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ದೊಂತಿಲದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ವಿದ್ಯುತ್ ಕಂಬವೊಂದು ಮುರಿದು, ಕಂಬ ಹಾಗೂ ವಿದ್ಯುತ್ ತಂತಿಗಳು ಕಾರಿನ ಮೇಲೆ ಬಿದ್ದಿವೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ವಿದ್ಯುತ್ ತಂತಿಗಳಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದರೂ, ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಇದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ.

ಕಾರಿನಲ್ಲಿದ್ದ ಸುಂದರ್ ಆಳ್ವ, ಅವರ ಪತ್ನಿ ಹಾಗೂ ಸೊಸೆ ಯಾವುದೇ ಗಾಯಗಳಿಲ್ಲದೆ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.





