Breaking
4 Nov 2026, Wed

ಬಂಟ್ವಾಳದಲ್ಲಿ ಎಲ್ಐಸಿ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ: ಸಾಧಕರಿಗೆ ಸನ್ಮಾನ

ಬಂಟ್ವಾಳ: ಕಳೆದ 70 ವರ್ಷಗಳ ಅವಧಿಯಲ್ಲಿ ದೇಶದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿರುವ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಹಲವು ಮಹತ್ವದ ಬದಲಾವಣೆಗಳಿಗೆ ನಾಂದಿ ಹಾಡಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ವಿಮಾ ಪ್ರತಿನಿಧಿಗಳ ವಿವಿಧ ಬೇಡಿಕೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಲಾಗಿದೆ ಎಂದು ಅಖಿಲ ಭಾರತ ಜೀವ ವಿಮಾ ನಿಗಮ ಪ್ರತಿನಿಧಿಗಳ ದಕ್ಷಿಣ ಮಧ್ಯ ವಲಯದ ಉಪಾಧ್ಯಕ್ಷ ಎ.ಎಸ್. ಲೋಕೇಶ್ ಶೆಟ್ಟಿ ಧರ್ಮಸ್ಥಳ ಹೇಳಿದರು.


ಬಿ.ಸಿ.ರೋಡಿನಲ್ಲಿ ಮಂಗಳವಾರ ಅಖಿಲ ಭಾರತ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘಟನೆಯ ಬಂಟ್ವಾಳ ಘಟಕದ ವತಿಯಿಂದ ನಡೆದ ವಾರ್ಷಿಕ ಮಹಾಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಸಂಘದ ಅಧ್ಯಕ್ಷ ಚಿತ್ತರಂಜನ್ ಎನ್.ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಬಲಿಷ್ಠ ಸಂಘಟನೆಯಿಂದ ಮಾತ್ರ ಪ್ರತಿನಿಧಿಗಳು ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದರು.


ಸಂಘಟನೆಯ ಉಡುಪಿ ವಿಭಾಗದ ಅಧ್ಯಕ್ಷ ಎಂ.ಎಸ್. ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಬಂಟ್ವಾಳ ಎಲ್ಐಸಿ ಹಿರಿಯ ಶಾಖಾಧಿಕಾರಿ ಗುರುದತ್ತ್ ನಾಯಕ್ ಹಾಗೂ ಉಪ ಶಾಖಾಧಿಕಾರಿ ಮುತ್ತಯ್ಯ ಮಾರಾಠಿ ಅವರು ವಿಮಾ ಕ್ಷೇತ್ರದ ಬೆಳವಣಿಗೆ ಮತ್ತು ಪಾಲಿಸಿದಾರರಿಗೆ ನೀಡಲಾಗುತ್ತಿರುವ ಸೇವೆಗಳ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಾಧಕ ವಿಮಾ ಪ್ರತಿನಿಧಿಗಳು ಹಾಗೂ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ, ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯೂ ನಡೆಯಿತು.


ಕಾರ್ಯಕ್ರಮದಲ್ಲಿ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ ಕೆ.ಪಿ., ರಾಜ್ಯ ಮಹಿಳಾ ವಿಭಾಗದ ಉಪ ಸಂಚಾಲಕಿ ಭವಾನಿ, ಬಂಟ್ವಾಳ ಮಹಿಳಾ ಸಮಿತಿ ಅಧ್ಯಕ್ಷೆ ವಿಜಯ ಕುಮಾರಿ ಇಂದ್ರ ಮತ್ತಿತರರು ಉಪಸ್ಥಿತರಿದ್ದರು.


ಸಂಘದ ಮಾಜಿ ಅಧ್ಯಕ್ಷ ರೋಹಿದಾಸ್ ಕುಂದರ್ ಸ್ವಾಗತಿಸಿದರು. ರಾಜಶ್ರೀ ಪರಾಡ್ಕರ್ ಪ್ರಾರ್ಥಿಸಿದರು. ಹಿರಿಯ ಪ್ರತಿನಿಧಿ ವಸಂತ ಪ್ರಭು ವಂದಿಸಿದರು. ಕಾರ್ಯದರ್ಶಿ ರಘುರಾಮ ಪೈ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಚಂದ್ರಶೇಖರ ಲೆಕ್ಕಪತ್ರ ಮಂಡಿಸಿದರು. ಹಿರಿಯ ಪ್ರತಿನಿಧಿ ನವೀನ್ ಕೊಡ್ಮಾನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *