ಬಂಟ್ವಾಳ: ಹುಟ್ಟಿನಿಂದಲೇ ಕಿವಿ ಸಮಸ್ಯೆಯಿಂದ ಬಳಲುತ್ತಿರುವ ನಾಲ್ಕು ವರ್ಷದ ಮಗುವಿನ ಚಿಕಿತ್ಸೆಗೆ ಕರುನಾಡು ಚಾರಿಟೇಬಲ್ ಟ್ರಸ್ಟ್ (ರಿ.) ಕರ್ನಾಟಕ ವತಿಯಿಂದ ₹10,000 ಆರ್ಥಿಕ ನೆರವು ನೀಡಲಾಯಿತು.

ಬಂಟ್ವಾಳ ತಾಲೂಕಿನ ಕಲ್ಲಗುಡ್ಡೆ ಗ್ರಾಮದ ಪಲ್ಲಮಜಲು ನಿವಾಸಿ ಯಶೋಧ ಮತ್ತು ಆನಂದ ಪೂಜಾರಿ ದಂಪತಿಯ ನಾಲ್ಕು ವರ್ಷದ ಪುತ್ರಿ ನವ್ಯ ಹುಟ್ಟಿನಿಂದಲೇ ಕಿವಿ ಸಮಸ್ಯೆಯಿಂದ ಬಳಲುತ್ತಿದ್ದು, ಇದರಿಂದ ಮಗುವಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರ ಸಲಹೆಯಂತೆ ಕಾಕ್ಲಿಯರ್ ಇಂಪ್ಲಾಂಟ್ (Cochlear Implant) ಶಸ್ತ್ರಚಿಕಿತ್ಸೆ ನಡೆಸಿದಲ್ಲಿ ಮಗುವಿನ ಸಮಸ್ಯೆಗೆ ಪರಿಹಾರ ದೊರೆಯುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಮಗುವಿನ ಮುಂದಿನ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಕರುನಾಡು ಚಾರಿಟೇಬಲ್ ಟ್ರಸ್ಟ್‌ನ 2026ರ ಅಕ್ಟೋಬರ್ ತಿಂಗಳ 17ನೇ ಮಾಸಿಕ ಸೇವಾ ಯೋಜನೆಯಡಿ ₹10,000 ಧನಸಹಾಯವನ್ನು ನವೆಂಬರ್ 1ರಂದು ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು. ಸೇವಾ ಕಾರ್ಯಕ್ಕೆ ಸಹಕಾರ ನೀಡಿದ ಎಲ್ಲರಿಗೂ ಟ್ರಸ್ಟ್‌ನ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.





