ಸಿದ್ದಕಟ್ಟೆ: ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತಿದ್ದು, 2028ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ಹಿರಿಯ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿದ್ದಕಟ್ಟೆಯಲ್ಲಿ ಬಿಜೆಪಿ ವತಿಯಿಂದ ರಾಜ್ಯದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ ಕೆಲವು ವರ್ಷಗಳಿಂದ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ನಡೆಸದೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬುಡಮೇಲು ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಹಲವು ಜನಪರ ಯೋಜನೆಗಳನ್ನು ರದ್ದುಗೊಳಿಸುವ ಮೂಲಕ ರಾಜ್ಯ ಸರ್ಕಾರ ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಮತದಾರರನ್ನು ಮೋಸಗೊಳಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಯನ್ನೂ ವಂಚಿಸಿದೆ. ಇದೀಗ ತನ್ನದೇ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಆಪರೇಷನ್‌ನಲ್ಲಿ ಸಿಲುಕಿಸಿ ಬಲಿಪಶು ಮಾಡಿರುವುದು ದೊಡ್ಡ ದುರಂತವಾಗಿದೆ. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ರಾಜ್ಯದ ಜನರು ಬೇಸತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆಯಲಿದೆ ಎಂದು ಹೇಳಿದರು.

ಗ್ರಾಮ ಪಂಚಾಯತ್‌ಗಳಲ್ಲಿ ನೀಡಲಾಗುತ್ತಿದ್ದ 9 ಮತ್ತು 11ನೇ ನಮೂನೆ ಹಾಗೂ ಕಟ್ಟಡ ಪರವಾನಗಿ ನೀಡುವ ಅಧಿಕಾರವನ್ನು ನಗರ ಯೋಜನಾ ಪ್ರಾಧಿಕಾರಗಳಿಗೆ ವರ್ಗಾಯಿಸುವ ಮೂಲಕ ಗ್ರಾಮೀಣ ಭಾಗದ ಸಾವಿರಾರು ಜನರ ಬದುಕಿನೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ. ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ. ಕುಮ್ಕಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಮನೆ ಸಂಖ್ಯೆ ಹಾಗೂ ವಿದ್ಯುತ್ ಸಂಪರ್ಕ ದೊರೆಯುತ್ತಿಲ್ಲ. ವಸತಿ ಸೌಲಭ್ಯಗಳನ್ನೂ ನೀಡಲಾಗುತ್ತಿಲ್ಲ ಎಂದು ದೂರಿದರು.

ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ಬಡವರ ಜೀವನಾಧಾರವಾಗಿರುವ ಹಲವು ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿದರು.

ದೇಶದ ಐಕ್ಯತೆಯ ವಿಚಾರದಲ್ಲಿಯೂ ಕಾಂಗ್ರೆಸ್ ನಾಯಕರು ವಿದೇಶಿ ದೇಶದ್ರೋಹಿ ಶಕ್ತಿಗಳೊಂದಿಗೆ ಕೈಜೋಡಿಸಿ ದೇಶಕ್ಕೆ ಅಪಮಾನ ಮಾಡುತ್ತಿದ್ದಾರೆ. ಭಾರತದ ಪರ ಘೋಷಣೆ ಕೂಗಿದವರ ಮೇಲೆ ಪ್ರಕರಣ ದಾಖಲಿಸಿ, ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ರಕ್ಷಿಸಲಾಗುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ನೇರ ಆರೋಪ ಮಾಡಿದರು.

ಪ್ರತಿಭಟನಾ ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಬಿಜೆಪಿ ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಉಪಾಧ್ಯಕ್ಷ ವಸಂತ ಕುಮಾರ್ ಅಣ್ಣಾಳಿಕೆ, ಯುವಮೋರ್ಚಾ ಅಧ್ಯಕ್ಷ ದಿನೇಶ್ ಶೆಟ್ಟಿ ದಂಬೆದಾರ್, ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸತೀಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ರಾಯಿ, ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಸಿದ್ದಕಟ್ಟೆ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಸಂದೇಶ ಶೆಟ್ಟಿ ಪೂಡುಂಬ, ನಿರ್ದೇಶಕರಾದ ವಿಶ್ವನಾಥ್ ಶೆಟ್ಟಿಗಾರ್, ಶಿವ ಗೌಡ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಪಕ್ಷದ ಹಿರಿಯರಾದ ಅರ್ಕಕೀರ್ತಿ ಇಂದ್ರ, ಪ್ರಮುಖರಾದ ಸುರೇಶ್ ಕುಲಾಲ್, ಸುನೀಲ್ ಶೆಟ್ಟಿಗಾರ್, ದಾಮೋದರ ಪೂಜಾರಿ, ಉದಯ ಪೂಜಾರಿ, ದೀಪಕ್ ಶೆಟ್ಟಿಗಾರ್, ವಿಮಲಾ ಮೋಹನ್, ವಿದ್ಯಾ ಪ್ರಭು, ಗುಲಾಬಿ ಶೆಟ್ಟಿ, ಇಂದಿರಾ, ಶಕ್ತಿ ಕೇಂದ್ರ ಪ್ರಮುಖರಾದ ನವೀನ ಹೆಗ್ಡೆ, ತೇಜಸ್ ಕರ್ಪೆ, ಪ್ರಮುಖರಾದ ಹರೀಶ್ ಆಚಾರ್ಯ ರಾಯಿ, ಚಂದ್ರಶೇಖರ ಕರ್ಪೆ, ಮಾಧವ ಶೆಟ್ಟಿಗಾರ್, ದೇವರಾಜ್ ಸಾಲಿಯಾನ್, ಗಣೇಶ್ ಪೂಜಾರಿ, ಭೋಜ ಶೆಟ್ಟಿಗಾರ್, ಲಿಂಗಪ್ಪ ಪೂಜಾರಿ ಹಲಯಿ, ರಾಜೇಂದ್ರ ಕರ್ಪೆ, ಭಾಸ್ಕರ ಪ್ರಭು, ರಾಮಕೃಷ್ಣ ನಾಯಕ್, ವಿನೋದ್ ಅಡಪ, ನಾರಾಯಣ ಹೆಗ್ಡೆ, ಕೃಷ್ಣಪ್ಪ ಪೂಜಾರಿ ಕರ್ಪೆ ಹಾಗೂ ಉದಯ ಕರ್ಪೆ ಉಪಸ್ಥಿತರಿದ್ದರು.
ಪ್ರಭಾಕರ ಪ್ರಭು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.





