Breaking
3 Nov 2026, Tue

ಮಳೆಯ ನಡುವೆಯೂ ಬೆಳ್ತಂಗಡಿಯಲ್ಲಿ ತಿರಂಗಾ ನಡಿಗೆ ಮತ್ತು ಪ್ರತಿಭಟನೆ

ಬೆಳ್ತಂಗಡಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂವಿಧಾನ ವಿರೋಧಿಯಾಗಿದ್ದು, ಇದರ ವಿರುದ್ಧ ಸಂವಿಧಾನದ ಆಶಯದಂತೆ ಹೋರಾಟ ನಡೆಯುತ್ತಿದ್ದರೆ, ಬಿಜೆಪಿ ಮತ್ತು ಸಂಘಪರಿವಾರ ಮನುಸ್ಮೃತಿಯ ಆಧಾರದಲ್ಲಿ ಹೋರಾಟ ನಡೆಸುತ್ತಿವೆ. ಹೀಗಾಗಿ ದೇಶಾದ್ಯಂತ ಸಂವಿಧಾನ ಮತ್ತು ಮನುಸ್ಮೃತಿ ನಡುವಿನ ಸಂಘರ್ಷ ಆರಂಭವಾಗಿದ್ದು, ಅಂತಿಮ ಜಯ ಸಂವಿಧಾನಕ್ಕೇ ಲಭಿಸಲಿದೆ ಎಂದು ಖ್ಯಾತ ಅಂಕಣಕಾರ ಹಾಗೂ ಚಿಂತಕ ಶಿವಸುಂದರ್ ಹೇಳಿದರು.

ಲೋಕತಂತ್ರ ಬಚಾವೋ ಆಂದೋಲನ ಸಮಿತಿ ಬೆಳ್ತಂಗಡಿ ವತಿಯಿಂದ ಸೋಮವಾರ ಬೆಳ್ತಂಗಡಿಯಲ್ಲಿ ಆಯೋಜಿಸಿದ್ದ ತಿರಂಗಾ ನಡಿಗೆ ಮತ್ತು ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಎಸ್‌ಐಆರ್ ಹೆಸರಿನಲ್ಲಿ ದೇಶಾದ್ಯಂತ 13 ಕೋಟಿ ಹಾಗೂ ಕರ್ನಾಟಕದಲ್ಲಿ ಒಂದು ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ನುಸುಳುಕೋರರನ್ನು ಪತ್ತೆಹಚ್ಚುವ ನೆಪದಲ್ಲಿ ಭಾರತೀಯ ಮತದಾರರನ್ನೇ ಪಟ್ಟಿಯಿಂದ ಹೊರಗಿಡುವ ಕೆಲಸವನ್ನು ಚುನಾವಣಾ ಆಯೋಗದ ಮೂಲಕ ನಡೆಸಲಾಗುತ್ತಿದೆ ಎಂದು ಶಿವಸುಂದರ್ ಆರೋಪಿಸಿದರು.

ರಾಜ್ಯದಲ್ಲಿ ಒಂದು ಕೋಟಿ ಮತದಾರರನ್ನು ಕೈಬಿಟ್ಟಿರುವ ಚುನಾವಣಾ ಆಯೋಗದ ಕ್ರಮವನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸಿದ ಅವರು, ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳಿಸುವವರೆಗೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಪ್ರಜಾಪ್ರಭುತ್ವ ಉಳಿಸುವ ಹೋರಾಟ ಮುಂದುವರಿಯಲಿದೆ ಎಂದರು.

ಲೋಕತಂತ್ರ ಬಚಾವೋ ಆಂದೋಲನ ಸಮಿತಿ ಬೆಳ್ತಂಗಡಿ ಸಂಚಾಲಕ ಶೇಖರ್ ಲಾಯಿಲ ಮಾತನಾಡಿ, ಬಿಜೆಪಿ ವಿರೋಧಿ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದ ತಂಡವು ಜ್ಞಾನೇಶ್ ಕುಮಾರ್ ಮೂಲಕ ಆರ್‌ಎಸ್‌ಎಸ್‌ನ ಗುಪ್ತ ಕಾರ್ಯಸೂಚಿಯನ್ನು ಜಾರಿಗೊಳಿಸುತ್ತಿದೆ ಎಂದು ಆರೋಪಿಸಿದರು.

ದಲಿತರು, ಆದಿವಾಸಿಗಳು, ಮುಸ್ಲಿಮರು, ಕ್ರೈಸ್ತರು ಹಾಗೂ ಹಿಂದುಳಿದ ವರ್ಗಗಳ ಮತದಾರರನ್ನು ವ್ಯವಸ್ಥಿತವಾಗಿ ಹೊರಗಿಡಲಾಗುತ್ತಿದೆ. ಸ್ವಾಯತ್ತ ಸಂಸ್ಥೆಯಾಗಿದ್ದ ಚುನಾವಣಾ ಆಯೋಗವನ್ನು ಆರ್‌ಎಸ್‌ಎಸ್‌ನ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ ಎಂದು ಟೀಕಿಸಿದ ಅವರು, ದೇಶದ ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಜನಾಂದೋಲನಕ್ಕೆ ಶಕ್ತಿ ತುಂಬಲು ಬೆಳ್ತಂಗಡಿಯಲ್ಲಿ ಈ ಹೋರಾಟ ಆಯೋಜಿಸಲಾಗಿದೆ ಎಂದರು.

ಪ್ರತಿಭಟನೆಯನ್ನುದ್ದೇಶಿಸಿ ಪ್ರಜಾಪ್ರಭುತ್ವ ಉಳಿಸಿ ಆಂದೋಲನದ ಜಿಲ್ಲಾ ಸಂಚಾಲಕ ಹಾಗೂ ನ್ಯಾಯವಾದಿ ವಿನೋದ್ ಮಸ್ಕರೇನಸ್, ಆರ್‌ವೈಎ ಜಿಲ್ಲಾ ಉಪಸಂಚಾಲಕ ಲುಕ್ಮಾನ್ ನೆಲ್ಯಾಡಿ, ವೆಲ್ಪೇರ್ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಪದರಂಗಿ ಹಾಗೂ ಎಸ್‌ಕೆಎಸ್‌ಎಸ್‌ಎಫ್ ರಾಜ್ಯ ಉಪಾಧ್ಯಕ್ಷ ಕೆ.ಎಸ್. ಇಕ್ಬಾಲ್ ಬಾಳಿಲ ಮಾತನಾಡಿದರು.

ಲೋಕತಂತ್ರ ಬಚಾವೋ ಆಂದೋಲನ ಸಮಿತಿಯ ಸಹ ಸಂಚಾಲಕರಾದ ಶಾಫಿ ಬಂಗಾಡಿ, ಗ್ರೇಸಿ ಲೋಬೋ, ವೆಲ್ಪೇರ್ ಪಾರ್ಟಿ ಜಿಲ್ಲಾಧ್ಯಕ್ಷ ಎಂ. ದಿವಾಕರ ರಾವ್, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಜಾರುದ್ದೀನ್, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಜಿಲ್ಲಾಧ್ಯಕ್ಷ ಅಸ್ಲಾಂ ಪಂಜಲ, ಮುಖಂಡರಾದ ಸಂಜೀವ್ ನಾಯ್ಕ್, ನಿಲೇಶ್ ಎಚ್. ಪೆರಿಂಜೆ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದವರೆಗೆ ತಿರಂಗಾ ನಡಿಗೆ ನಡೆಯಿತು. ಧಾರಾಕಾರ ಮಳೆಯ ನಡುವೆಯೂ ಪ್ರತಿಭಟನಾಕಾರರು ಮಳೆಯಲ್ಲಿ ನೆನೆಯುತ್ತಾ ನಡಿಗೆಯಲ್ಲಿ ಪಾಲ್ಗೊಂಡರು. ಶಿವಸುಂದರ್ ಕೂಡ ಪ್ರತಿಭಟನಾಕಾರರೊಂದಿಗೆ ಹೆಜ್ಜೆ ಹಾಕಿದರು.

Leave a Reply

Your email address will not be published. Required fields are marked *