ಬೆಳ್ತಂಗಡಿ: ಅವೈಜ್ಞಾನಿಕ ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳಿಸುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ನವೆಂಬರ್ 2ರಂದು ಬೆಳ್ತಂಗಡಿಯಲ್ಲಿ ತಿರಂಗಾ ನಡಿಗೆ ಮತ್ತು ಪ್ರತಿಭಟನೆ ಆಯೋಜಿಸಲಾಗಿದೆ.

ಸಂಜೆ 4 ಗಂಟೆಗೆ ಬೆಳ್ತಂಗಡಿ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ತಿರಂಗಾ ನಡಿಗೆ ಆರಂಭಗೊಂಡು ಬೆಳ್ತಂಗಡಿ ಬಸ್ ನಿಲ್ದಾಣದವರೆಗೆ ಸಾಗಲಿದೆ. ಬಳಿಕ ಪ್ರತಿಭಟನೆ ನಡೆಯಲಿದೆ ಎಂದು ಲೋಕತಂತ್ರ ಬಚಾವೋ ಆಂದೋಲನ ಸಮಿತಿ ಬೆಳ್ತಂಗಡಿ ಸಂಚಾಲಕ ಶೇಖರ್ ಲಾಯಿಲ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ನಾಡಿನ ಖ್ಯಾತ ಚಿಂತಕ, ಅಂಕಣಕಾರ ಹಾಗೂ ಹೋರಾಟಗಾರ ಶಿವಸುಂದರ್ ಮತ್ತು ಖ್ಯಾತ ವಾಗ್ಮಿ, ಚಿಂತಕ, ಕೆಪಿಸಿಸಿ ವಕ್ತಾರ ಹಾಗೂ ಬೆಂಗಳೂರು ಮಹಾನಗರ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ ಭಾಗವಹಿಸಿ ಮಾತನಾಡಲಿದ್ದಾರೆ.

ಪ್ರತಿಭಟನೆಯ ಕುರಿತು ವರದಿ ಪ್ರಸಾರ ಮಾಡಲು ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿರುವಂತೆ ಶೇಖರ್ ಲಾಯಿಲ ಮನವಿ ಮಾಡಿದ್ದಾರೆ.



