Breaking
2 Nov 2026, Mon

ಪಾಣೆಮಂಗಳೂರು ಅಂಡರ್ಪಾಸ್ ಬಳಿ ಮಾದಕ ದ್ರವ್ಯ ಸೇವನೆ: ಯುವಕನ ಬಂಧನ

ಬಂಟ್ವಾಳ: ಪಾಣೆಮಂಗಳೂರಿನ ನೆಹರೂ ನಗರ ಅಂಡರ್ಪಾಸ್ ಬಳಿ ಮಾದಕ ದ್ರವ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಪೊಲೀಸರನ್ನು ಕಂಡು ಮತ್ತೋರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಬಂಧಿತನನ್ನು ಉಳ್ಳಾಲ ತಾಲೂಕಿನ ಬೋಳಿಯಾರ್ ನಿವಾಸಿ ಮಹಮ್ಮದ್ ನಾಸೀರ್ (29) ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಮಾದಕ ದ್ರವ್ಯ ಮತ್ತು ಮನಃಪ್ರಭಾವಿ ವಸ್ತುಗಳ ಕಾಯ್ದೆ (NDPS Act), 1985ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಗಸ್ತಿನ ವೇಳೆ ಪೊಲೀಸರಿಗೆ ಮಾಹಿತಿ
ಅಕ್ಟೋಬರ್ 30ರಂದು ರಾತ್ರಿ 9.15ರ ಸುಮಾರಿಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಅವರು ಸಿಬ್ಬಂದಿಯೊಂದಿಗೆ ಗಸ್ತು ತಿರುಗುತ್ತಿದ್ದಾಗ, ನೆಹರೂ ನಗರ ಅಂಡರ್ಪಾಸ್ ಬಳಿ ಇಬ್ಬರು ವ್ಯಕ್ತಿಗಳು ಮಾದಕ ದ್ರವ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿತ್ತು.


ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡವನ್ನು ಕಂಡು ಇಬ್ಬರಲ್ಲಿ ಒಬ್ಬ ಪರಾರಿಯಾಗಿದ್ದಾನೆ. ಮತ್ತೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಮಾದಕ ದ್ರವ್ಯ ಸೇವಿಸಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಆತನ ಬಳಿಯಿದ್ದ ಮೊಬೈಲ್ ಫೋನ್ ಹಾಗೂ ಮಾದಕ ದ್ರವ್ಯ ಸೇವನೆಗೆ ಬಳಸುತ್ತಿದ್ದ ಗಾಜಿನ ಟ್ಯೂಬ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪರಾರಿಯಾದ ವ್ಯಕ್ತಿಯನ್ನು ನೆಹರೂ ನಗರ ನಿವಾಸಿ ಸಿದ್ದೀಕ್ ಎಂದು ಗುರುತಿಸಲಾಗಿದೆ.


ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ದ್ರವ್ಯ ಸೇವನೆ ದೃಢ
ಬಳಿಕ ನಾಸೀರ್ನನ್ನು ವೈದ್ಯಕೀಯ ಪರೀಕ್ಷೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಕ್ಟೋಬರ್ 31ರಂದು ಬಂದ ಮೂತ್ರ ಪರೀಕ್ಷೆಯ ವರದಿಯಲ್ಲಿ ಆತನ ದೇಹದಲ್ಲಿ ‘ಆಂಫೆಟಮೈನ್’ (Amphetamine) ಮಾದಕ ದ್ರವ್ಯದ ಅಂಶ ಇರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ದ್ರವ್ಯ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ನಾಸೀರ್ ವಿರುದ್ಧ ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 27(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *