ಮಂಗಳೂರು: ಬಪ್ಪನಾಡುವಿನ ಬಡಗುಹಿತ್ಲು ಸಮೀಪ ಶಾಂಭವಿ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ದೋಣಿ ಮಗುಚಿ ನಾಪತ್ತೆಯಾಗಿದ್ದ ಕೊಕ್ರಾಣಿ ನಿವಾಸಿ ಡೇನಿಯಲ್ ಜಿ. ಫುಟಾಡೊ (65) ಅವರ ಮೃತದೇಹ ಶುಕ್ರವಾರ ಪತ್ತೆಯಾಗಿದೆ.
ಕೊಕ್ರಾಣಿ ನಿವಾಸಿ ಡೇನಿಯಲ್ ಮತ್ತು ದುಬೈನಲ್ಲಿ ನೆಲೆಸಿರುವ ಅವರ ಸಹೋದರ ನೆಲ್ಸನ್ ಗುರುವಾರ ಸಂಜೆ ಹವ್ಯಾಸಿ ಮೀನುಗಾರಿಕೆಗಾಗಿ ಕೊಕ್ರಾಣಿ ಬಳಿಯಿಂದ ಸಣ್ಣ ದೋಣಿಯಲ್ಲಿ ಶಾಂಭವಿ ನದಿಗೆ ತೆರಳಿದ್ದರು.

ರಾತ್ರಿ ಬಪ್ಪನಾಡುವಿನ ಬಡಗುಹಿತ್ಲು ಬಳಿ ಅವರು ಬೀಸಿದ್ದ ಮೀನುಗಾರಿಕಾ ಬಲೆ ಕಲ್ಲಿಗೆ ಸಿಲುಕಿಕೊಂಡಿತ್ತು. ಬಲೆಯನ್ನು ಬಿಡಿಸಲು ಯತ್ನಿಸುತ್ತಿದ್ದ ವೇಳೆ ದೋಣಿ ಮಗುಚಿದೆ. ಈ ಸಂದರ್ಭದಲ್ಲಿ ನೀರಿನ ರಭಸಕ್ಕೆ ಕೊಚ್ಚಿಹೋದ ಡೇನಿಯಲ್ ನಾಪತ್ತೆಯಾಗಿದ್ದರು. ಅವರ ಸಹೋದರ ನೆಲ್ಸನ್ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಗುರುವಾರ ರಾತ್ರಿಯೇ ಶೋಧ ಕಾರ್ಯ ಆರಂಭಿಸಲಾಗಿತ್ತು. ಆದರೆ ಯಾವುದೇ ಸುಳಿವು ದೊರೆತಿರಲಿಲ್ಲ. ಶುಕ್ರವಾರ ಎನ್‌ಡಿಆರ್‌ಎಫ್ ತಂಡ, ಪೊಲೀಸ್ ಉಪನಿರೀಕ್ಷಕರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯವನ್ನು ಚುರುಕುಗೊಳಿಸಿದರು. ದೋಣಿ ಮಗುಚಿದ ಸ್ಥಳದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಡೇನಿಯಲ್ ಅವರ ಮೃತದೇಹ ಪತ್ತೆಯಾಗಿದೆ.

ಡೇನಿಯಲ್ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಮುಂಬೈನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದರು. ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.



