Breaking
31 Oct 2026, Sat

ಅಳದಂಗಡಿ ಜಿ.ಪಂ. ಕ್ಷೇತ್ರದ ಮೇಲೆ ಜಯಾನಂದ ಪಿಲಿಕಲ ಕಣ್ಣು; ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಸಾಧ್ಯತೆ?

ಬೆಳ್ತಂಗಡಿ: ಸ್ಥಳೀಯಾಡಳಿತ ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೇ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಜಿಲ್ಲಾ ಪಂಚಾಯತ್ ಕ್ಷೇತ್ರ ರಾಜಕೀಯ ವಲಯದಲ್ಲಿ ಗಮನ ಸೆಳೆಯುತ್ತಿದೆ. ಈ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಆದಿವಾಸಿ ಪರ ಹೋರಾಟಗಾರ ಜಯಾನಂದ ಪಿಲಿಕಲ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಕಳೆದ 15ರಿಂದ 20 ವರ್ಷಗಳಿಂದ ಮಲೆಕುಡಿಯ ಸಮುದಾಯದ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ಜಯಾನಂದ ಪಿಲಿಕಲ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ರಸ್ತೆ, ವಿದ್ಯುತ್, ಸೇತುವೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ಹಲವು ಹೋರಾಟಗಳ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಶೋಷಣೆ ಮತ್ತು ಅನ್ಯಾಯದ ಘಟನೆಗಳು ಗಮನಕ್ಕೆ ಬಂದಾಗ ಸ್ಥಳಕ್ಕೆ ಧಾವಿಸಿ ಸಂತ್ರಸ್ತರ ಪರವಾಗಿ ನಿಲ್ಲುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ.

ನೆರಿಯ ಗ್ರಾಮದ ಕಾಟಾಜೆ ಸುಂದರ ಮಲೆಕುಡಿಯ ಅವರ ಕೈ ಕಡಿತ ಪ್ರಕರಣದಲ್ಲಿ ತಿಂಗಳುಗಟ್ಟಲೆ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹೋರಾಟಕ್ಕೆ ಜಯಾನಂದ ಪಿಲಿಕಲ ನೇತೃತ್ವ ವಹಿಸಿದ್ದರು. ಆರೋಪಿಗಳಿಗೆ ಪ್ರಬಲ ರಾಜಕೀಯ ಬೆಂಬಲವಿದ್ದರೂ, ನಿರಂತರ ಹೋರಾಟದ ಬಳಿಕ ಅವರು ಬಂಧನಕ್ಕೊಳಗಾಗಿ ಜೈಲು ಸೇರಿದ್ದರು ಎಂದು ತಿಳಿದುಬಂದಿದೆ.

ಮಲೆಕುಡಿಯ, ಮರಾಠಿ ನಾಯ್ಕ ಹಾಗೂ ಕೊರಗ ಸಮುದಾಯಗಳ ಮೂಲಭೂತ ಸೌಕರ್ಯ ಮತ್ತು ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಒಂದು ವಾರಗಳ ಕಾಲ ನಿರಂತರ ಪ್ರತಿಭಟನೆ ನಡೆಸಲಾಗಿತ್ತು. ಈ ಹೋರಾಟದ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ತಾಲೂಕಿನ 36 ಸರ್ಕಾರಿ ಕಚೇರಿಗಳ ಅಧಿಕಾರಿಗಳನ್ನು ತಾಲೂಕು ಕಚೇರಿಗೆ ಕಳುಹಿಸಿ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವಂತೆ ಸೂಚಿಸಿದ್ದರು. ಆದಿವಾಸಿ ಸಮುದಾಯದ ಹಕ್ಕುಗಳಿಗಾಗಿ ನಡೆದ ಈ ಹೋರಾಟ ಜಿಲ್ಲೆಯ ಗಮನ ಸೆಳೆದಿತ್ತು.

2019ರ ಆಗಸ್ಟ್ 9ರಂದು ಸಂಭವಿಸಿದ ಭೀಕರ ಪ್ರಕೃತಿ ವಿಕೋಪದಿಂದ ನೆರಿಯ, ಚಾರ್ಮಾಡಿ, ಮಿತ್ತಬಾಗಿಲು ಹಾಗೂ ಮಲವಂತಿಗೆ ಗ್ರಾಮಗಳ ನೂರಾರು ಮಲೆಕುಡಿಯ ಕುಟುಂಬಗಳು ಮನೆ ಮತ್ತು ನೆಲೆ ಕಳೆದುಕೊಂಡಿದ್ದವು. ಈ ಸಂದರ್ಭದಲ್ಲಿ ಜಯಾನಂದ ಪಿಲಿಕಲ ಅವರು ತಮ್ಮ ಸ್ವಂತ ವಾಹನದಲ್ಲಿ ವಿವಿಧ ಪ್ರದೇಶಗಳಿಗೆ ತೆರಳಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೆಲವೆಡೆ ಅಧಿಕಾರಿಗಳನ್ನು ತಮ್ಮ ವಾಹನದಲ್ಲೇ ಕರೆದೊಯ್ದು ಸ್ಥಳ ಪರಿಶೀಲನೆಗೆ ನೆರವಾಗಿದ್ದರು. ಸಂತ್ರಸ್ತರಿಗೆ ಸರ್ಕಾರದ ಅನುದಾನ ಹಾಗೂ ಮನೆ ದೊರಕಿಸುವ ನಿಟ್ಟಿನಲ್ಲಿಯೂ ಶ್ರಮಿಸಿದ್ದರು.

ನೆರಿಯ ಗ್ರಾಮದ ಬಾಂಜಾರು ಮಲೆಕುಡಿಯ ಕಾಲೋನಿಯ 48 ಕುಟುಂಬಗಳು ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ಜೀವನ ನಡೆಸುತ್ತಿದ್ದುದನ್ನು ಗಮನಿಸಿದ ಅವರು, ಎರಡು ಎಸ್ಟೇಟ್ ಮಾಲೀಕರೊಂದಿಗೆ ಮಾತುಕತೆ ನಡೆಸಿ ಅನುಮತಿ ಪಡೆದು, ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಯತ್ನಿಸಿದ್ದರು. ಸುಮಾರು 600ಕ್ಕೂ ಹೆಚ್ಚು ವಿದ್ಯುತ್ ಕಂಬಗಳ ಅಳವಡಿಕೆಯ ಮೂಲಕ ಕಾಲೋನಿಯ ಮನೆಗಳಿಗೆ ವಿದ್ಯುತ್ ಬೆಳಕು ತಲುಪುವಂತೆ ಮಾಡಿರುವುದು ಅವರ ಹೋರಾಟದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ ವಿಚಾರದಲ್ಲಿಯೂ ರಾಜಿ ಇಲ್ಲದ ಹೋರಾಟ ನಡೆಸುತ್ತಿರುವ ಅವರು, ನಡ, ಸವಣಾಲು ಹಾಗೂ ಸುಲ್ಕೇರಿಮೊಗ್ರು ಗ್ರಾಮಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾವೂರು, ಕುತ್ಲೂರು, ಸವಣಾಲು ಗ್ರಾಮದ ಹಿತ್ತಿಲಪೇಲ, ನಾವರ ಹಾಗೂ ನಾರಾವಿ ಗ್ರಾಮದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿಯೂ ಪ್ರಯತ್ನ ಮುಂದುವರಿಸಿದ್ದಾರೆ. ಕೆಲವು ಅನುಮತಿಗಳು ದೊರೆತಿದ್ದು, ಕೇಂದ್ರ ಸರ್ಕಾರದ ಅನುಮತಿ ದೊರೆತಲ್ಲಿ ಉಳಿದ ಪ್ರದೇಶಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ನಿರೀಕ್ಷೆಯಿದೆ. ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗೂ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.

ಜಯಾನಂದ ಪಿಲಿಕಲ ಅವರು ಮಲೆಕುಡಿಯ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ಕರ್ನಾಟಕ ರಾಜ್ಯ ಸರ್ಕಾರದ ಅಲೆಮಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಸಮಿತಿ ಸದಸ್ಯರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಸೌಮ್ಯ ಸ್ವಭಾವದ ಜೊತೆಗೆ ಸಮುದಾಯದ ಹಕ್ಕುಗಳು ಮತ್ತು ಜನರ ಸಮಸ್ಯೆಗಳ ವಿಚಾರದಲ್ಲಿ ಹೋರಾಟದ ಮನೋಭಾವ ಹೊಂದಿರುವ ಜಯಾನಂದ ಪಿಲಿಕಲ, ಮಲೆಕುಡಿಯ ಸಮುದಾಯದ ಯುವಜನರಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಅಳದಂಗಡಿ ಜಿಲ್ಲಾ ಪಂಚಾಯತ್ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಅವರ ರಾಜಕೀಯ ಸ್ಪರ್ಧೆಯ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಪಕ್ಷದಿಂದ ಅವರು ಕಣಕ್ಕಿಳಿಯುವ ಸಾಧ್ಯತೆ ಕುರಿತು ಸ್ಥಳೀಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದ್ದು, ಅವರ ಸ್ಪರ್ಧೆ ಆದಿವಾಸಿ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ.

Leave a Reply

Your email address will not be published. Required fields are marked *