ಬೆಳ್ತಂಗಡಿ: ರಾಜ್ಯದ ಆದಿವಾಸಿ ಹಾಗೂ ವಿಶೇಷವಾಗಿ ದುರ್ಬಲ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ, ಇದಕ್ಕಾಗಿ ವಿಶೇಷ ಮುತುವರ್ಜಿ ವಹಿಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಬೆಳ್ತಂಗಡಿ ತಾಲೂಕಿನ ಆದಿವಾಸಿಗಳ ಪರವಾಗಿ ಅಭಿನಂದಿಸಲಾಯಿತು.

ರಾಜ್ಯದ ಅರಣ್ಯ ಮತ್ತು ಅರಣ್ಯಾಧಾರಿತ ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ನೀಡುವ ಉದ್ದೇಶದಿಂದ ಈ ನಿಗಮ ಸ್ಥಾಪಿಸಲಾಗಿದೆ.
ನಿಗಮದ ಮೂಲಕ ಬುಡಕಟ್ಟು ಸಮುದಾಯಗಳಿಗೆ ಆರ್ಥಿಕ ನೆರವು, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ, ಮಾರುಕಟ್ಟೆ ಸಂಪರ್ಕ, ಜೀವನೋಪಾಯದ ಅವಕಾಶಗಳು, ಶಿಕ್ಷಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ಉದ್ದೇಶ ಹೊಂದಲಾಗಿದೆ. ಜತೆಗೆ ಬುಡಕಟ್ಟು ಜನರ ಸಾಂಪ್ರದಾಯಿಕ ಜೀವನೋಪಾಯಕ್ಕೆ ಬೆಂಬಲ ನೀಡುವ ಯೋಜನೆಗಳನ್ನೂ ರೂಪಿಸುವ ಉದ್ದೇಶವಿದೆ.

ನಿಗಮದ ಸ್ಥಾಪನೆಗಾಗಿ ಒಟ್ಟು 33.36 ಕೋಟಿ ರೂ. ಅನುದಾನ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದು ರಾಜ್ಯ ಸರ್ಕಾರಕ್ಕೆ ಆದಿವಾಸಿ ಸಮುದಾಯಗಳ ಅಭಿವೃದ್ಧಿಯ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.
ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ವಿಶೇಷ ಕಾಳಜಿ ವಹಿಸಿದ ಬಿ.ಕೆ. ಹರಿಪ್ರಸಾದ್ ಅವರನ್ನು ತಾಲೂಕು ಮಲೆಕುಡಿಯ ಸಂಘದ ಕಾರ್ಯದರ್ಶಿ ಜಯಾನಂದ ಪಿಲಿಕಲ, ಮುಖಂಡ ಲಕ್ಷ್ಮಣ ಆಲಂಗಾಯಿ ಹಾಗೂ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ಶೇಖರ್ ಲಾಯಿಲ ಅವರು ಬೆಂಗಳೂರಿನಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

ಈ ಹಿಂದೆ ಸೆಪ್ಟೆಂಬರ್ 2ರಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿಯಾಗಿ ಪ್ರತ್ಯೇಕ ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ವಿಶೇಷ ಮುತುವರ್ಜಿ ವಹಿಸಿ ನಿಗಮ ಸ್ಥಾಪನೆಗೆ ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಇದೀಗ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಲಾಯಿತು.





