ಬಂಟ್ವಾಳ: ಕಳೆದ 14 ವರ್ಷಗಳಿಂದ ಪ್ರೌಢಶಾಲಾ ಸಹ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹುದ್ದೆಗೆ ಬಡ್ತಿ ನೀಡದಿರುವುದರಿಂದ ಅನೇಕ ಅರ್ಹ ಶಿಕ್ಷಕರು ಅವಕಾಶ ವಂಚಿತರಾಗಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಅರ್ಹ ಶಿಕ್ಷಕರಿಗೆ ಬಡ್ತಿ ನೀಡಿ ಖಾಲಿ ಇರುವ ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಆಗ್ರಹಿಸಿದ್ದಾರೆ.

ಈ ಕುರಿತು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿರುವ ಅವರು, ಕಳೆದ 14 ವರ್ಷಗಳಿಂದ ಪ್ರೌಢಶಾಲಾ ಸಹ ಶಿಕ್ಷಕರಿಂದ ಪದವಿ ಪೂರ್ವ ಉಪನ್ಯಾಸಕ ಹುದ್ದೆಗೆ ಬಡ್ತಿ ನೀಡದ ಪರಿಣಾಮ ಅನೇಕ ಅರ್ಹ ಶಿಕ್ಷಕರು ನಿವೃತ್ತರಾಗಿದ್ದಾರೆ. ಇನ್ನೂ ಕೆಲವರು ನಿವೃತ್ತಿಯ ಅಂಚಿನಲ್ಲಿದ್ದು, ಉಳಿದ ಕೆಲವೇ ಶಿಕ್ಷಕರಿಗೆ ಮಾತ್ರ ಸೇವಾವಧಿ ಉಳಿದಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಬಡ್ತಿ ಪ್ರಕ್ರಿಯೆಗೆ ಸಂಬಂಧಿಸಿದ ಹಿಂದಿನ ನಿಯಮಗಳನ್ನು ಬದಲಾಯಿಸಿ, ಪರೀಕ್ಷೆಯ ಮೂಲಕ ಅರ್ಹ ಶಿಕ್ಷಕರಿಗೆ ಬಡ್ತಿ ನೀಡಲು ತೀರ್ಮಾನಿಸಿತ್ತು. ಅದರಂತೆ ಅರ್ಹ ಶಿಕ್ಷಕರಿಗೆ ಪರೀಕ್ಷೆ ನಡೆಸಿ ಫಲಿತಾಂಶವನ್ನೂ ಪ್ರಕಟಿಸಲಾಗಿದೆ. ಆದರೆ ಫಲಿತಾಂಶ ಪ್ರಕಟವಾದ ಬಳಿಕವೂ ಬಡ್ತಿ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವುದು ಶಿಕ್ಷಕರಲ್ಲಿ ನಿರಾಶೆ ಮೂಡಿಸಿದೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಪದವಿ ಪೂರ್ವ ಉಪನ್ಯಾಸಕರಾಗಿ ಸೇವೆ ಸಲ್ಲಿಸುವ ಆಸಕ್ತಿ ಹೊಂದಿರುವ ಅರ್ಹ ಪ್ರೌಢಶಾಲಾ ಶಿಕ್ಷಕರಿಗೆ ತಕ್ಷಣ ಬಡ್ತಿ ನೀಡುವ ಮೂಲಕ ಖಾಲಿ ಇರುವ ಉಪನ್ಯಾಸಕ ಹುದ್ದೆಗಳನ್ನು ಭರ್ತಿ ಮಾಡಬೇಕು. ಈ ಮೂಲಕ ಶಿಕ್ಷಕರಿಗೆ ನ್ಯಾಯ ಒದಗಿಸುವುದರ ಜತೆಗೆ ಶಿಕ್ಷಣ ಇಲಾಖೆಯಲ್ಲಿನ ಹುದ್ದೆಗಳ ಕೊರತೆಯನ್ನೂ ನೀಗಿಸಬೇಕು ಎಂದು ಪ್ರಭಾಕರ ಪ್ರಭು ಒತ್ತಾಯಿಸಿದ್ದಾರೆ.

ಈ ಮನವಿಯ ಪ್ರತಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೂ ಸಲ್ಲಿಸಲಾಗಿದೆ.


