ಮಂಗಳೂರು: ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಗುಣಮಟ್ಟದ ಸೇವೆ ನೀಡುತ್ತಾ ಬಂದಿರುವ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ಮತ್ತೊಮ್ಮೆ ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಗರ್ಭಪಾತ ಮತ್ತು ಗರ್ಭಪಾತಾನಂತರದ ಆರೈಕೆಯಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವಲ್ಲಿ ಯಶಸ್ವಿಯಾಗಿರುವ ಆಸ್ಪತ್ರೆಯು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಶಸ್ತಿಗೆ ಆಯ್ಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಐಪಾಸ್ ಫೌಂಡೇಶನ್ ಸಹಯೋಗದಲ್ಲಿ ನಡೆಸಿದ ಸಮೀಕ್ಷೆಯಲ್ಲಿ, 2025-26ನೇ ಸಾಲಿನಲ್ಲಿ ಕಾನೂನುಬದ್ಧ ಗರ್ಭಪಾತ ಮತ್ತು ಗರ್ಭಪಾತಾನಂತರದ ಆರೈಕೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯದ ಜಿಲ್ಲಾಸ್ಪತ್ರೆಗಳ ಪೈಕಿ ಲೇಡಿಗೋಷನ್ ಆಸ್ಪತ್ರೆ ಪ್ರಥಮ ಸ್ಥಾನ ಪಡೆದಿದೆ.

ಆಸ್ಪತ್ರೆಯ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ ಒಟ್ಟು 304 ಗರ್ಭಪಾತ ಪ್ರಕರಣಗಳನ್ನು ನಿರ್ವಹಿಸಲಾಗಿದ್ದು, ಸಮಗ್ರ ಗರ್ಭಪಾತ ಆರೈಕೆ ಕಾರ್ಯಕ್ರಮದಡಿ ಅಗತ್ಯ ನಿಯಮಗಳನ್ನು ಪಾಲಿಸಿ, ಗರ್ಭಪಾತಾನಂತರದ ತಾಯಿ ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವಲ್ಲಿ ಆಸ್ಪತ್ರೆ ಯಶಸ್ವಿಯಾಗಿದೆ. ಗುಣಮಟ್ಟದ ವೈದ್ಯಕೀಯ ಸೇವೆ ಹಾಗೂ ವ್ಯವಸ್ಥಿತ ಆರೈಕೆಯ ಮೂಲಕ ಸಾಧಿಸಿದ ಈ ಯಶಸ್ಸು ಆಸ್ಪತ್ರೆಯ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ.
2025-26ನೇ ಸಾಲಿನ ಗರ್ಭಪಾತ ಪ್ರಕರಣಗಳ ವಿವರ

ಆಸ್ಪತ್ರೆಯಲ್ಲಿ ನಿರ್ವಹಿಸಲಾದ 304 ಪ್ರಕರಣಗಳ ಪೈಕಿ ಗರ್ಭಾವಧಿಗೆ ಅನುಗುಣವಾಗಿ ದಾಖಲಾಗಿರುವ ವಿವರಗಳು ಹೀಗಿವೆ:
• 9 ವಾರಗಳೊಳಗಿನ ಗರ್ಭಪಾತ: 191
• 10ರಿಂದ 12 ವಾರಗಳು: 31
• 12ರಿಂದ 20 ವಾರಗಳು: 52
• 20ರಿಂದ 24 ವಾರಗಳು: 25
• 24 ವಾರಗಳ ನಂತರ: 5
ಒಟ್ಟು ಪ್ರಕರಣಗಳು: 304

ಇದರೊಂದಿಗೆ, ಶೇ. 95ರಷ್ಟು ಫಲಾನುಭವಿಗಳಿಗೆ ಕುಟುಂಬ ಕಲ್ಯಾಣ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿ, ಅವುಗಳ ಅನುಸರಣೆಗೆ ಉತ್ತೇಜನ ನೀಡಿರುವುದು ಆಸ್ಪತ್ರೆಯ ಮತ್ತೊಂದು ಪ್ರಮುಖ ಸಾಧನೆಯಾಗಿದೆ.

ತಾಯಿ ಮರಣ ತಡೆಗೆ ವಿನೂತನ ವ್ಯವಸ್ಥೆಗಳ ಕೊಡುಗೆ
ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಿಕೊಂಡಿರುವ ವಾಟ್ಸಾಪ್ ಆಧಾರಿತ ಹೈರಿಸ್ಕ್ ಪ್ರೆಗ್ನೆನ್ಸಿ ಟ್ರ್ಯಾಕಿಂಗ್ ವ್ಯವಸ್ಥೆ, ಪ್ರಸೂತಿ ತೀವ್ರ ನಿಗಾ ಘಟಕ, ಪ್ರಸೂತಿ ಕ್ರಿಟಿಕಲ್ ಕೇರ್ ಘಟಕ ಹಾಗೂ ಹೈರಿಸ್ಕ್ ಪ್ರೆಗ್ನೆನ್ಸಿ ಡೆಲಿವರಿ ಘಟಕಗಳು ತಾಯಿ ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿವೆ.
ಇದಲ್ಲದೆ, ವಿವಿಧ ಸಂಘ-ಸಂಸ್ಥೆಗಳ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಅನುದಾನದ ನೆರವಿನಿಂದ ಸಂಗ್ರಹಿಸಲಾದ ಅತ್ಯಾಧುನಿಕ ಜೀವ ರಕ್ಷಕ ಉಪಕರಣಗಳು ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಸಹಕಾರಿಯಾಗಿವೆ.

ವೈದ್ಯಕೀಯ ಅಧೀಕ್ಷಕರಿಂದ ಅಭಿನಂದನೆ
ಆಸ್ಪತ್ರೆಯ ಈ ಸಾಧನೆ ಕುರಿತು ಮಾತನಾಡಿದ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರು, ಯಶಸ್ಸಿಗೆ ಕಾರಣರಾದ ಕೆಎಂಸಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಅರಿವಳಿಕೆ ವಿಭಾಗ, ರೇಡಿಯೋಡಯಾಗ್ನೋಸಿಸ್ ವಿಭಾಗ ಹಾಗೂ ನವಜಾತ ಶಿಶು ವಿಭಾಗದ ತಜ್ಞ ವೈದ್ಯರನ್ನು ಅಭಿನಂದಿಸಿದರು.

ಅಲ್ಲದೆ, ಶುಶ್ರೂಷಕ ವೃಂದ, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ತಾಂತ್ರಿಕ ವರ್ಗದವರ ಸೇವೆಯನ್ನು ಶ್ಲಾಘಿಸಿದರು. ಆರೋಗ್ಯ ಸಚಿವರು, ಜನಪ್ರತಿನಿಧಿಗಳು, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜಮುಖಿ ಚಿಂತನೆಯ ಸಂಘ-ಸಂಸ್ಥೆಗಳು ನೀಡಿದ ಸಹಕಾರವನ್ನು ಸ್ಮರಿಸಿದರು.
ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ಗಳಿಸಿರುವ ಈ ರಾಜ್ಯಮಟ್ಟದ ಗೌರವವನ್ನು ಉಳಿಸಿಕೊಂಡು, ತಾಯಂದಿರ ಆರೋಗ್ಯ ರಕ್ಷಣೆಯಲ್ಲಿ ಇನ್ನಷ್ಟು ಗುಣಮಟ್ಟದ ಸೇವೆ ನೀಡಲು ಎಲ್ಲರೂ ನಿರಂತರವಾಗಿ ಶ್ರಮಿಸಬೇಕು. ತಾಯಂದಿರ ಬದುಕಿನಲ್ಲಿ ಆಶಾಕಿರಣವಾಗಿ ಆಸ್ಪತ್ರೆ ಮುಂದುವರಿಯಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವ ಮೂಲಕ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ಸಾಧಿಸಿರುವ ಈ ಹೆಗ್ಗಳಿಕೆ ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಮತ್ತೊಂದು ಗೌರವ ತಂದಿದೆ.


