Breaking
2 Nov 2026, Mon

ಗರ್ಡಾಡಿಯಲ್ಲಿ ದೀಪಾವಳಿ ಪ್ರಯುಕ್ತ ಆಟೋಟ ಸ್ಪರ್ಧೆ: ರಕ್ಷಿತ್ ಶಿವರಾಂ ಚಾಲನೆ

ಗರ್ಡಾಡಿ: ಸತ್ಯಶ್ರೀ ಫ್ರೆಂಡ್ಸ್ ಪಡ್ತಿರೆ, ಗರ್ಡಾಡಿ ವತಿಯಿಂದ 3ನೇ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಲಾದ ಆಟೋಟ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತ್ಯಶ್ರೀ ಫ್ರೆಂಡ್ಸ್ ಪಡ್ತಿರೆಯ ಅಧ್ಯಕ್ಷ ಪ್ರದೀಪ್ ಪಡ್ತಿರೆ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಿತ್ ಶಿವರಾಂ, ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ದೀಪಾವಳಿ ಹಬ್ಬವನ್ನು ಜಾತಿ-ಧರ್ಮದ ಎಲ್ಲೆಗಳನ್ನು ಮೀರಿ ಸೌಹಾರ್ದತೆಯಿಂದ ಆಚರಿಸುವ ಉದ್ದೇಶದಿಂದ ಇಂತಹ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ. ಸರ್ವಜನಾಂಗದ ಶಾಂತಿಯ ತೋಟವನ್ನು ಸಮೃದ್ಧಗೊಳಿಸಲು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೇರಾ, ಪಡಂಗಡಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಮೆಲ್ವಿನ್ ಸಿಕ್ವೇರಾ, ಅಬ್ಬಾಸ್ ಪಜೆಮಾರ್, ಶ್ರೀ ಸತ್ಯ ಸಾರಮುಪ್ಪಣ್ಯ ದೈವಸ್ಥಾನ ಪಡ್ತಿರೆ-ಗರ್ಡಾಡಿಯ ಪ್ರಧಾನ ಅರ್ಚಕ ಬಾಬು ಪಡ್ತಿರೆ, ದೈವಸ್ಥಾನದ ಅಧ್ಯಕ್ಷ ಕರಿಯ ಪಡ್ತಿರೆ ಹಾಗೂ ಮಾಜಿ ಅಧ್ಯಕ್ಷ ನಾರಾಯಣ ಉಪಸ್ಥಿತರಿದ್ದರು.

ದೀಪಾವಳಿ ಹಬ್ಬದ ಸಂಭ್ರಮದೊಂದಿಗೆ ಕ್ರೀಡಾಸ್ಫೂರ್ತಿ, ಸೌಹಾರ್ದತೆ ಹಾಗೂ ಪರಸ್ಪರ ಬಾಂಧವ್ಯವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಕ್ರೀಡಾಕೂಟಕ್ಕೆ ಗಣ್ಯರು ಶುಭ ಹಾರೈಸಿದರು.

Leave a Reply

Your email address will not be published. Required fields are marked *