Breaking
5 Nov 2026, Thu

ರಸ್ತೆ ಗುಂಡಿಗಳ ವಿರುದ್ಧ ಪ್ರತಿಭಟನೆ: ರಸ್ತೆ ತಡೆದ ವ್ಯಕ್ತಿಯನ್ನು ಬಂಧಿಸಿ ಬಿಡುಗಡೆ

ಮೂಡುಬಿದಿರೆ: ರಸ್ತೆ ಗುಂಡಿಗಳಿಂದ ಉಂಟಾದ ಅಪಘಾತವನ್ನು ಖಂಡಿಸಿ ರಸ್ತೆ ಮಧ್ಯದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದ ಸಿದ್ದಕಟ್ಟೆಯ ಪುಚ್ಚಮೊಗರು ನಿವಾಸಿ ಪ್ರಶಾಂತ್ ಎಂಬಾತನನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ.

ಸೋಮವಾರ ಸಂಜೆ ಪ್ರಶಾಂತ್ ಅವರು ಮಹಾವೀರ ಕಾಲೇಜು ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ವಾಹನದ ಚಕ್ರ ರಸ್ತೆ ಗುಂಡಿಯಲ್ಲಿ ಸಿಲುಕಿಕೊಂಡು, ವಾಹನ ಸಹಿತ ಮಗುಚಿ ಬಿದ್ದು ಗಾಯಗೊಂಡಿದ್ದರು.

ಅಪಘಾತಕ್ಕೆ ರಸ್ತೆ ಗುಂಡಿಗಳೇ ಕಾರಣ ಎಂದು ಆರೋಪಿಸಿದ ಅವರು, ತಮ್ಮ ದ್ವಿಚಕ್ರ ವಾಹನವನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ, ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ಚುನಾಯಿತ ಪ್ರತಿನಿಧಿಗಳು ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ರಸ್ತೆ ಗುಂಡಿಗಳನ್ನು ಮುಚ್ಚುವವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಶಾಸಕರು ಹಾಗೂ ಸಂಸದರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ರಸ್ತೆಯ ದುಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಿಂದಾಗಿ ರಸ್ತೆಯಲ್ಲಿ ವಾಹನಗಳ ಉದ್ದನೆಯ ಸಾಲು ನಿರ್ಮಾಣವಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಸಂಚಾರಕ್ಕೆ ಅಡ್ಡಿಪಡಿಸಿದ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಚುನಾಯಿತ ಪ್ರತಿನಿಧಿಗಳನ್ನು ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಪ್ರಶಾಂತ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಮಂಗಳವಾರ ಅವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ.

Leave a Reply

Your email address will not be published. Required fields are marked *