ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ರಾಜ್ಯದ ಜನರಿಗೆ ಬೆಲೆ ಏರಿಕೆಯ ಮತ್ತೊಂದು ಬರೆ ಬಿದ್ದಿದೆ. ಈಗಾಗಲೇ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆಯಿಂದ ಬೇಸರಗೊಂಡಿರುವ ಗ್ರಾಹಕರಿಗೆ ಇದೀಗ ಕೆಎಂಎಫ್ ಮತ್ತೊಂದು ಶಾಕ್ ನೀಡಿದೆ. ನಂದಿನಿ ಬ್ರ್ಯಾಂಡ್ ನ ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ಸೇರಿದಂತೆ ಹಲವು ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲಾಗಿದ್ದು, ಪರಿಷ್ಕೃತ ದರಗಳು ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ.

ಕೆಎಂಎಫ್ ಪ್ರಕಟಿಸಿರುವ ಹೊಸ ದರಪಟ್ಟಿಯ ಪ್ರಕಾರ, ನಂದಿನಿ ಉತ್ಪನ್ನಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಪ್ರಮುಖವಾಗಿ ತುಪ್ಪದ ವಿವಿಧ ಪ್ಯಾಕಿಂಗ್ಗಳ ಬೆಲೆಯಲ್ಲಿ ₹135ರವರೆಗೆ ಹೆಚ್ಚಳವಾಗಿದ್ದು, ಬೆಣ್ಣೆ ಮತ್ತು ಪನ್ನೀರ್ ದರಗಳೂ ಏರಿಕೆಯಾಗಿವೆ.
ಒಂದು ಲೀಟರ್ ನಂದಿನಿ ತುಪ್ಪದ ಸ್ಯಾಚೆಟ್ ಬೆಲೆ ₹715ರಿಂದ ₹850ಕ್ಕೆ ಏರಿಕೆಯಾಗಿದ್ದು, ₹135 ಹೆಚ್ಚಳವಾಗಿದೆ. ಪೆಟ್ ಜಾರ್ ತುಪ್ಪದ ಬೆಲೆ ₹735ರಿಂದ ₹870ಕ್ಕೆ ಹೆಚ್ಚಳವಾಗಿದೆ. ಇನ್ನು 15 ಕೆಜಿ ತುಪ್ಪದ ಟಿನ್ ಬೆಲೆ ₹11,625ರಿಂದ ₹14,100ಕ್ಕೆ ಏರಿಕೆಯಾಗಿದ್ದು, ಬರೋಬ್ಬರಿ ₹2,475 ಹೆಚ್ಚಳವಾಗಿದೆ.

ಅದೇ ರೀತಿ 500 ಗ್ರಾಂ ಉಪ್ಪು ಬೆಣ್ಣೆಯ ಬೆಲೆ ₹310ರಿಂದ ₹380ಕ್ಕೆ, ಉಪ್ಪಿಲ್ಲದ ಬೆಣ್ಣೆಯ ಬೆಲೆ ₹330ರಿಂದ ₹390ಕ್ಕೆ ಹೆಚ್ಚಳವಾಗಿದೆ. 200 ಗ್ರಾಂ ಉಪ್ಪಿಲ್ಲದ ಬೆಣ್ಣೆಯ ಬೆಲೆ ₹135ರಿಂದ ₹160ಕ್ಕೆ ಏರಿಕೆಯಾಗಿದೆ. ಬೆಣ್ಣೆ ಬ್ಲಿಸ್ಟರ್ ಪ್ಯಾಕ್ ಬೆಲೆಯೂ ₹80ರಿಂದ ₹90ಕ್ಕೆ ಹೆಚ್ಚಳವಾಗಿದೆ.

ಬೇಕರಿ, ಹೋಟೆಲ್ ತಿಂಡಿ-ತಿನಿಸುಗಳ ಬೆಲೆಯೂ ಏರಿಕೆ ಸಾಧ್ಯತೆ
ಈಗಾಗಲೇ ಹಾಲಿನ ದರ ಏರಿಕೆಯ ಹಿನ್ನೆಲೆಯಲ್ಲಿ ಹಲವು ಹೋಟೆಲ್ ಗಳಲ್ಲಿ ಕಾಫಿ ಮತ್ತು ಟೀ ಬೆಲೆಯನ್ನು ₹5ರವರೆಗೆ ಹೆಚ್ಚಿಸಲಾಗಿತ್ತು. ಇದೀಗ ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ದರಗಳೂ ಏರಿಕೆಯಾಗಿರುವುದರಿಂದ ಹೋಟೆಲ್, ಬೇಕರಿ ಮತ್ತು ಸಿಹಿ ತಿಂಡಿ ತಯಾರಿಕಾ ಉದ್ಯಮದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ಗಳನ್ನು ವಿವಿಧ ತಿಂಡಿ-ತಿನಿಸು ಮತ್ತು ಸಿಹಿ ಪದಾರ್ಥಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಹೀಗಾಗಿ ಉತ್ಪಾದನಾ ವೆಚ್ಚ ಹೆಚ್ಚಳದ ನೆಪದಲ್ಲಿ ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗುವ ಆತಂಕ ಎದುರಾಗಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಹಿ ತಿಂಡಿಗಳು ಹಾಗೂ ವಿವಿಧ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗುವ ಸಮಯದಲ್ಲೇ ನಂದಿನಿ ಉತ್ಪನ್ನಗಳ ಬೆಲೆ ಏರಿಕೆಯಾಗಿರುವುದು ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆಯಿದೆ.


