Breaking
4 Nov 2026, Wed

ಕುಮಟಾದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗಾಗಿ 33ನೇ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕುಮಟಾ: ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಆರೋಗ್ಯ ಸೇವೆ, ಆರೈಕೆ ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಸೇವಾಭಾರತಿ–ಸೇವಾಧಾಮ ಉತ್ತರ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ 33ನೇ ವಸತಿಯುತ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ನ.4ರಂದು ಕುಮಟಾದ ಕೆನರಾ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಉದ್ಘಾಟನೆಗೊಂಡಿತು.

ಕೆನರಾ ಹೆಲ್ತ್ ಕೇರ್ ಸೆಂಟರ್ ಮತ್ತು ಲಯನ್ಸ್ ಕ್ಲಬ್ ಕುಮಟಾ ಸಹಯೋಗದಲ್ಲಿ ಆಯೋಜಿಸಲಾದ ಶಿಬಿರವನ್ನು ಕೆನರಾ ಹೆಲ್ತ್ ಕೇರ್ ಸೆಂಟರ್ ಅಧ್ಯಕ್ಷ ಡಾ. ಗಣೇಶ್ ಗಣಪತಿ ಹೆಗ್ಡೆ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗಾಗಿ ಸೇವಾಭಾರತಿ ನಡೆಸುತ್ತಿರುವ ಈ ಶಿಬಿರ ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಶಿಬಿರದಲ್ಲಿ ದೊರೆಯುವ ಸೌಲಭ್ಯಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು. ಜೀವನದಲ್ಲಿ ಕಷ್ಟ-ನೋವುಗಳು ಸಹಜ. ಅವುಗಳನ್ನು ಧೈರ್ಯದಿಂದ ಎದುರಿಸಿ ಸಾಧಿಸುವ ಛಲ ಪ್ರತಿಯೊಬ್ಬರಲ್ಲೂ ಇರಬೇಕು ಎಂದರು.

ಸೇವಾಭಾರತಿ ಕನ್ಯಾಡಿ ಅಧ್ಯಕ್ಷ ಹಾಗೂ ಸೇವಾಧಾಮದ ಸಂಸ್ಥಾಪಕ ಕೆ. ವಿನಾಯಕ ರಾವ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕೆನರಾ ಹೆಲ್ತ್ ಕೇರ್ ಸೆಂಟರ್ ಶಿಬಿರ ಆಯೋಜನೆಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಸೇವೆಯಲ್ಲಿ ಸಂಸ್ಥೆಯ ಸಹಕಾರ ಅಮೂಲ್ಯವಾಗಿದೆ. ಇಂತಹ ಶಿಬಿರಗಳು ದಿವ್ಯಾಂಗರಿಗೆ ಹೊಸ ಭರವಸೆ ಹಾಗೂ ಆತ್ಮವಿಶ್ವಾಸ ತುಂಬಲಿದ್ದು, ಸೌಲಭ್ಯಗಳನ್ನು ಬಳಸಿಕೊಂಡು ಜೀವನದಲ್ಲಿ ಹೊಸ ಉತ್ಸಾಹದಿಂದ ಮುನ್ನಡೆಯಬೇಕು ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಕುಮಟಾ ತಾಲೂಕು ವೈದ್ಯಾಧಿಕಾರಿ ಡಾ. ಅಜ್ಞಾ ನಾಯಕ್, ಲಯನ್ಸ್ ಕ್ಲಬ್ ಅಧ್ಯಕ್ಷ ಯೋಗಾನಂದ ಗಾಂಧಿ, ಕೆನರಾ ಹೆಲ್ತ್ ಕೇರ್ ಸೆಂಟರ್‌ನ ಜನರಲ್ ಸರ್ಜನ್ ಡಾ. ಸಚ್ಚಿದಾನಂದ ನಾಯಕ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಂಜಿನಿಯರ್ ಕೇಶವ ನಾಯ್ಕ್, ಸೇವಾಭಾರತಿ ಕಾರವಾರ ಜಿಲ್ಲಾ ಸಂಯೋಜಕ ಜನಾರ್ಧನ್ ನಾಯಕ್ ಹಾಗೂ ಲಯನ್ಸ್ ಕ್ಲಬ್ ಸದಸ್ಯ ಎಂ.ಕೆ. ಷಣ್ಮುಗನ್ ಉಪಸ್ಥಿತರಿದ್ದರು.

ಶಿಬಿರದಲ್ಲಿ ಮೂವರು ದಿವ್ಯಾಂಗರಿಗೆ ಗಾಲಿಕುರ್ಚಿ, ಇಬ್ಬರಿಗೆ ವಾಕರ್ ವಿತರಿಸಲಾಯಿತು. ಇದರೊಂದಿಗೆ ಸೆಲ್ಫ್ ಕೇರ್ ಕಿಟ್, ಮೆಡಿಕಲ್ ಕಿಟ್, ಏರ್ ಬೆಡ್ ಹಾಗೂ ವಾಟರ್ ಬೆಡ್‌ಗಳನ್ನು ಫಲಾನುಭವಿಗಳಿಗೆ ನೀಡಲಾಯಿತು. ಒಟ್ಟು 13 ಮಂದಿ ದಿವ್ಯಾಂಗರು ಶಿಬಿರದಲ್ಲಿ ಪಾಲ್ಗೊಂಡರು.

ಉಡುಪಿ ಜಿಲ್ಲೆಯ ಕ್ಷೇತ್ರ ಸಂಯೋಜಕಿ ಕವಿತಾ ಸ್ವಾಗತಿಸಿದರು. ಸೇವಾಭಾರತಿ ಹಿರಿಯ ಪ್ರಬಂಧಕ ಚರಣ್ ಕುಮಾರ್ ಎಂ. ಕಾರ್ಯಕ್ರಮ ನಿರೂಪಿಸಿದರು. ಉತ್ತರ ಕನ್ನಡ ಜಿಲ್ಲೆಯ ಕ್ಷೇತ್ರ ಸಂಯೋಜಕ ಸುಧಾಕರ್ ವಂದಿಸಿದರು.

Leave a Reply

Your email address will not be published. Required fields are marked *