Breaking
5 Nov 2026, Thu

ತ್ರೋಬಾಲ್ ಪಂದ್ಯಾಟದಲ್ಲಿ ಎಲ್.ಸಿ.ಆರ್. ವಿದ್ಯಾಸಂಸ್ಥೆಗೆ ಐದು ಟ್ರೋಫಿಗಳ ಗರಿ

ಕಕ್ಯಪದವು: ವಲಯ ಹಾಗೂ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟಗಳಲ್ಲಿ ಕಕ್ಯಪದವಿನ ಎಲ್.ಸಿ.ಆರ್. ಇಂಡಿಯನ್ ಸ್ಕೂಲ್ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದು, ಒಟ್ಟು ಐದು ಟ್ರೋಫಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ದೇವಸ್ಯ ಮೂಡೂರು ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 4ರಂದು ನಡೆದ 14ರಿಂದ 17 ವರ್ಷದೊಳಗಿನ ಬಾಲಕ-ಬಾಲಕಿಯರ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಎಲ್.ಸಿ.ಆರ್. ಇಂಡಿಯನ್ ಸ್ಕೂಲ್ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿದರು.

ಪ್ರಾಥಮಿಕ ಹಾಗೂ ಪ್ರೌಢ ವಿಭಾಗಗಳ ಬಾಲಕರ ಮತ್ತು ಬಾಲಕಿಯರ ತಂಡಗಳು ನಾಲ್ಕೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವು.

ಇದರೊಂದಿಗೆ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಮಹಿಳಾ ಪದವಿಪೂರ್ವ ಕಾಲೇಜು, ಮೆಲ್ಕಾರಿನಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟ-2026ರಲ್ಲಿ ಎಲ್.ಸಿ.ಆರ್. ವಿದ್ಯಾಸಂಸ್ಥೆಯ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದು ರನ್ನರ್-ಅಪ್ ಪ್ರಶಸ್ತಿ ಗಳಿಸಿತು.

ಒಟ್ಟು ಐದು ಟ್ರೋಫಿಗಳನ್ನು ತನ್ನದಾಗಿಸಿಕೊಂಡಿರುವುದು ಸಂಸ್ಥೆಯ ಕ್ರೀಡಾ ಕ್ಷೇತ್ರದ ಸಾಧನೆಗೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ. ವಿದ್ಯಾರ್ಥಿಗಳ ಪರಿಶ್ರಮ, ಕ್ರೀಡಾಸ್ಫೂರ್ತಿ, ತಂಡದ ಒಗ್ಗಟ್ಟು ಹಾಗೂ ತರಬೇತುದಾರರು ಮತ್ತು ಶಿಕ್ಷಕರ ಮಾರ್ಗದರ್ಶನ ಈ ಯಶಸ್ಸಿಗೆ ಕಾರಣವಾಗಿದೆ.

ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರು, ಮುಖ್ಯ ಶಿಕ್ಷಕಿ, ಉಪನ್ಯಾಸಕರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಹರಿಣಾಕ್ಷಿ ಜಿ.ಕೆ. ಹಾಗೂ ಕಾಲೇಜು ವಿಭಾಗದ ದೈಹಿಕ ಶಿಕ್ಷಣ ಉಪನ್ಯಾಸಕ ಪೃಥ್ವಿರಾಜ್ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸಾಧನೆಗೆ ಮಾರ್ಗದರ್ಶನ ನೀಡಿದ್ದಾರೆ.

Leave a Reply

Your email address will not be published. Required fields are marked *