ಪುತ್ತೂರು: ಪುತ್ತೂರು ಸ್ವಾಭಿಮಾನದ ನೆಲ, ಹಿಂದುತ್ವದ ನೆಲ. ಇಲ್ಲಿ ಯಾರೂ ಗುಲಾಮರಲ್ಲ ಎಂಬುದನ್ನು ಶಾಸಕರು ಮೊದಲು ಅರ್ಥಮಾಡಿಕೊಳ್ಳಬೇಕು. ಪುತ್ತೂರಿನ ಶಾಸಕರಾಗಿ ಘನತೆಗೆ ತಕ್ಕಂತೆ ಮಾತನಾಡಬೇಕು ಎಂದು ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ಸಹ ಸಂಚಾಲಕ ಪ್ರಸನ್ನ ದರ್ಬೆ ಆಗ್ರಹಿಸಿದ್ದಾರೆ.

ಜಿಲ್ಲೆಯ ಲಕ್ಷಾಂತರ ಕಾರ್ಯಕರ್ತರ ಬೆವರಿನ ಪರಿಶ್ರಮದಿಂದ ಪಕ್ಷ ಬೆಳೆದು ನಿಂತಿದೆ. ಅಂತಹ ಕಾರ್ಯಕರ್ತರ ಅಧ್ಯಕ್ಷರನ್ನು ಏಕವಚನದಲ್ಲಿ ಸಂಬೋಧಿಸುವುದು ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ; ಜಿಲ್ಲೆಯ ಲಕ್ಷಾಂತರ ಕಾರ್ಯಕರ್ತರ ಭಾವನೆಗಳಿಗೆ ಮಾಡಿದ ಅವಮಾನವಾಗಿದೆ ಎಂದು ಅವರು ಹೇಳಿದ್ದಾರೆ.
ಶಾಸಕರು ತಮ್ಮ ಸ್ಥಾನದ ಘನತೆಯನ್ನು ಅರಿತು ಮಾತನಾಡಬೇಕು. ಬಾಯಿಗೆ ಬಂದಂತೆ ಮಾತನಾಡಿ ಊರಿನ ಮಾನ ಹರಾಜು ಹಾಕಬಾರದು ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದಲ್ಲಿ ಅಭಿವೃದ್ಧಿ ಎಲ್ಲಿ ನಡೆದಿದೆ? ಅಭಿವೃದ್ಧಿ ನಿಮ್ಮ ರೀಲ್ಸ್ ಮತ್ತು ಫ್ಲೆಕ್ಸ್‌ಗಳಲ್ಲಿ ಮಾತ್ರ ಕಾಣಿಸುತ್ತಿದೆ. ಹಳ್ಳಿಗಳ ರಸ್ತೆಗಳ ಸ್ಥಿತಿ ನೋಡಿದರೆ ರಸ್ತೆಗಿಂತ ಗುಂಡಿಗಳೇ ಹೆಚ್ಚಾಗಿ ಕಾಣಿಸುತ್ತವೆ. ಕೇಂದ್ರ ಸರ್ಕಾರದ ಯೋಜನೆಗಳಿಗೆ ಫ್ಲೆಕ್ಸ್ ಹಾಕುವವರು, ಅದೇ ಪಕ್ಷದ ಜಿಲ್ಲಾಧ್ಯಕ್ಷರನ್ನು ತುಚ್ಛವಾಗಿ ಮಾತನಾಡುವುದು ಎಷ್ಟು ಸರಿ? ರಾಜ್ಯದ ಅನುದಾನದಲ್ಲಿ ಫ್ಲೆಕ್ಸ್‌ಗಳೇ ಕಾಣಿಸುತ್ತಿದ್ದು, ನೈಜ ಅಭಿವೃದ್ಧಿ ಕಾರ್ಯಗಳು ಎಲ್ಲಿ ನಡೆದಿವೆ ಎಂದು ಪ್ರಸನ್ನ ದರ್ಬೆ ಪ್ರಶ್ನಿಸಿದ್ದಾರೆ.

ಇತರರನ್ನು ತುಚ್ಛವಾಗಿ ಮಾತನಾಡುವುದನ್ನು ಬಿಟ್ಟು ಕ್ಯಾಮೆರಾದ ಹಿಂದೆಯೂ ಜನರ ಕಷ್ಟಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.


