ವಿಟ್ಲ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕದ ವತಿಯಿಂದ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಶಾಖೆ ಮುಳಿಯ–ದಂಬೆಯಲ್ಲಿ ನಡೆಯುತ್ತಿರುವ ಯೋಗ ತರಗತಿಯ ಅಂಗವಾಗಿ ಅ. 25ರಂದು ಮಾತೃವಂದನಾ, ಮಾತೃಧ್ಯಾನ ಹಾಗೂ ಮಾತೃಭೋಜನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಳೆದ 56 ದಿನಗಳಿಂದ ನಡೆಯುತ್ತಿರುವ ಯೋಗ ತರಗತಿಯ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದುರ್ಗಾಪರಮೇಶ್ವರಿ ಶಾಖೆ ಅಡ್ಯನಡ್ಕದ ಶಿಕ್ಷಕಿ ಜಯಲಕ್ಷ್ಮಿ ಅಕ್ಕ ವಹಿಸಿದ್ದರು. ಮುಖ್ಯ ಮಾತುಗಾರರಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಹ ಸಂಚಾಲಕಿ (ಮಾತೆಯರ ವಿಭಾಗ) ಮಾಧುರಿ ಭಾಗವಹಿಸಿದ್ದರು. ಬೊಳಂತಿಮೊಗರು ಶಾಖೆಯ ಶಿಕ್ಷಕಿ ಲತಾ ಮುಖ್ಯ ಅತಿಥಿಯಾಗಿದ್ದರು.

ಮುಖ್ಯ ಮಾತುಗಾರ್ತಿ ಮಾಧುರಿ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾಯಿ ನೀಡುವ ಪ್ರೀತಿ, ತ್ಯಾಗ, ಸಂಸ್ಕಾರ ಹಾಗೂ ಮಮತೆಯನ್ನು ಜೀವನದುದ್ದಕ್ಕೂ ಸ್ಮರಿಸಬೇಕು. ಹೆತ್ತವರು ಮತ್ತು ಹಿರಿಯರನ್ನು ಸದಾ ಗೌರವದಿಂದ ಕಾಣುವುದು ನಮ್ಮ ಕರ್ತವ್ಯವಾಗಿದ್ದು, ಮಾತೃ–ಪಿತೃ ಭಕ್ತಿಯೊಂದಿಗೆ ಉತ್ತಮ ಸಂಸ್ಕಾರಯುತ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ಬಳಿಕ ಮಾತೃಧ್ಯಾನವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಯೋಗಪಟುಗಳು ತಮ್ಮ ಮನೆಗಳಿಂದ ವಿವಿಧ ಬಗೆಯ ಸಾತ್ವಿಕ ಆಹಾರವನ್ನು ತಯಾರಿಸಿ ತಂದಿದ್ದರು. ಎಲ್ಲರೂ ಪರಸ್ಪರ ಪ್ರೀತಿಯಿಂದ ಆಹಾರವನ್ನು ಹಂಚಿಕೊಂಡು ಮಾತೃಭೋಜನದಲ್ಲಿ ಪಾಲ್ಗೊಂಡರು. ಕೊನೆಯಲ್ಲಿ ಕೈತುತ್ತಿನ ಮೂಲಕ ಆಹಾರವನ್ನು ಪರಸ್ಪರ ತಿನ್ನಿಸುವ ಮೂಲಕ ಆತ್ಮೀಯತೆಯನ್ನು ಹಂಚಿಕೊಂಡರು. ಆರಂಭದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಸಾಮೂಹಿಕ ಪ್ರಸಾದ ವಿತರಿಸಲಾಯಿತು.

ಯೋಗ ತರಗತಿಯಿಂದ ತಮಗಾದ ಅನುಭವಗಳನ್ನು ತುಳಸಿ, ಆನಂದ, ಸುಗುಣ ಸುರೇಶ್, ಗೀತಾ ವಿನೋದ್, ರಾಮ, ಮೋಹನದಾಸ ಹಾಗೂ ಹರೀಶ್ ಹಂಚಿಕೊಂಡರು. ಶ್ರೀಮತಿ ಸುಧಾ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ವಂಶಿ ವೈಯಕ್ತಿಕ ಪ್ರಾರ್ಥನೆ ಸಲ್ಲಿಸಿದರು. ಜಯಲಕ್ಷ್ಮಿ ಸ್ವಾಗತಿಸಿದರು. ಹರಿಣಾಕ್ಷಿ ಶಾಖೆಯ 48 ದಿನಗಳ ವರದಿ ವಾಚಿಸಿದರು. ಸೌಮ್ಯ ವಂದನಾರ್ಪಣೆ ಸಲ್ಲಿಸಿದರು.

ವಿಟ್ಲ ನಗರದ ವಿವಿಧ ಶಾಖೆಗಳ ಯೋಗಬಂಧುಗಳು, ನಗರ ಪ್ರಮುಖರು, ಬೆಳ್ತಂಗಡಿ ಶಾಖೆಯ ಯೋಗಬಂಧುಗಳು ಹಾಗೂ ಜಿಲ್ಲಾ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರು, ಯೋಗಪಟುಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 300 ಮಂದಿ ಭಾಗವಹಿಸಿದ್ದರು.

ಮಾತೃವಂದನಾ, ಮಾತೃಧ್ಯಾನ ಹಾಗೂ ಮಾತೃಭೋಜನದಂತಹ ಕಾರ್ಯಕ್ರಮಗಳ ಮೂಲಕ ತಾಯಿಯ ಮಹತ್ವವನ್ನು ಅರಿಯುವುದರ ಜೊತೆಗೆ ಕುಟುಂಬದ ಹಿರಿಯರನ್ನು ಗೌರವಿಸುವ ಸಂಸ್ಕಾರ, ಪರಸ್ಪರ ಪ್ರೀತಿ, ಆತ್ಮೀಯತೆ ಹಾಗೂ ಸಾಮಾಜಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಂದೇಶವನ್ನು ಸಾರಲಾಯಿತು.


