Breaking
26 Oct 2026, Mon

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಮೇಶ್ವರ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಮಾಮೇಶ್ವರ ಒಕ್ಕೂಟದ ಪದಗ್ರಹಣ ಕಾರ್ಯಕ್ರಮವು ಅ. 25ರಂದು ಭಾನುವಾರ ಬೊಳಂತಿಮೊಗೆರು ಶಾಲಾ ಸಭಾಭವನದಲ್ಲಿ ನಡೆಯಿತು.

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮುಖ್ಯಸ್ಥ ಕೃಷ್ಣಯ್ಯ ಬಲ್ಲಾಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗದ ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಒಕ್ಕೂಟದ ಅಧ್ಯಕ್ಷ ಹರೀಶ್ ವಿ. ಮಾಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಅವರು ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿ ಮಾತನಾಡಿ, ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪದಾಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಬೇಕು. ಒಕ್ಕೂಟದ ಪ್ರಗತಿಯೊಂದಿಗೆ ಸದಸ್ಯರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೂ ಸಹಕರಿಸಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸರಕಾರಗಳು ಮಾಡದ ಅನೇಕ ಜನಪರ ಕಾರ್ಯಗಳನ್ನು ವೀರೇಂದ್ರ ಹೆಗ್ಗಡೆ ದಂಪತಿಗಳು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೈಗೊಂಡು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಾಲ್ವರು ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಉತ್ತಮ ಸಂಘವನ್ನು ಗುರುತಿಸಿ ಸನ್ಮಾನಿಸಲಾಯಿತು. ನಿಕಟಪೂರ್ವ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಬೊಳಂತಿಮೊಗೆರು ಶಾಲೆಯ ಮುಖ್ಯ ಶಿಕ್ಷಕ ಇಸ್ಮಾಯಿಲ್, ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ, ಪಟ್ಟಣ ಪಂಚಾಯಿತಿ ಸದಸ್ಯ ಅಬ್ದುಲ್ ರಹಿಮಾನ್, ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ಅಧ್ಯಕ್ಷೆ ತುಳಸಿ, ವೀರಪ್ಪ ಗೌಡ ಸೇರಿದಂತೆ ಮಾಮೇಶ್ವರ ಒಕ್ಕೂಟದ ನೂತನ ಅಧ್ಯಕ್ಷ ಪುರಂದರ ಕೈಂತಿಲ ಉಪಸ್ಥಿತರಿದ್ದರು.

ಕಲ್ಲಡ್ಕ ವಲಯದ ಮೇಲ್ವಿಚಾರಕ ಸುಖರಾಜ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಯಶೋಧ ವರದಿ ವಾಚಿಸಿದರು. ಸುಮಲತಾ ವಂದಿಸಿದರು. ಪುರಂದರ ಕಾರ್ಯಕ್ರಮ ನಿರೂಪಿಸಿದರು. ಪದಗ್ರಹಣ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Leave a Reply

Your email address will not be published. Required fields are marked *