ಪುತ್ತೂರು: ನಿತ್ಯಜೀವನದಲ್ಲಿ ತಾಯಂದಿರು ಯೋಗಾಭ್ಯಾಸವನ್ನು ರೂಢಿಸಿಕೊಂಡರೆ ಆರೋಗ್ಯವಂತರಾಗುವುದರ ಜೊತೆಗೆ ಮಾನಸಿಕ ಒತ್ತಡದಿಂದಲೂ ಮುಕ್ತರಾಗಬಹುದು ಎಂದು ಸರ್ಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಹಾಗೂ ಯೋಗರಾಜ್ಯ ಸಂಪನ್ಮೂಲ ವ್ಯಕ್ತಿ ಡಾ. ಶಾಂತಾ ಪುತ್ತೂರು ಹೇಳಿದರು.

ಅವರು ಅ.2ರಂದು ಪುತ್ತೂರು ಕಲ್ಲೇಗದ ಭಾರತ ಮಾತಾ ಕಲಾಮಂದಿರದಲ್ಲಿ ಪತಂಜಲಿ ಯೋಗಶಿಕ್ಷಣ ಸಮಿತಿ ನೇತ್ರಾವತಿ ವಲಯದ ಪುತ್ತೂರು ಕಲ್ಲೇಗ, ತೆಂಕಿಲ ಹಾಗೂ ಪಾಂಗಳಾಯಿ ಶಾಖೆಗಳ ನೇತೃತ್ವದಲ್ಲಿ ನಡೆದ ಮಾತೃವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜಿಲ್ಲಾ ಸಹಸಂಚಾಲಕ ಲೋಕೇಶ್ ಮುಖ್ಯ ಭಾಷಣ ಮಾಡಿ, ಮನೆಯಲ್ಲಿ ಆನಂದ ನೆಲೆಸಲು ತಾಯಂದಿರ ತ್ಯಾಗವೇ ಪ್ರಮುಖ ಕಾರಣವಾಗಿದೆ. ಸಮಾಜವು ಮಾತೆಯರನ್ನು ಗೌರವಿಸುವ ಮೂಲಕ ಸುಖೀ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದರು.

ಶಿಕ್ಷಕಿ ಅರ್ಚನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೇಘನಾ ಸ್ವಾಗತಿಸಿದರು. ದೀಪಿಕಾ ಕಾರ್ಯಕ್ರಮ ನಿರೂಪಿಸಿದರು. ಚಂದ್ರಲೇಖ ವಂದಿಸಿದರು. ಕಾರ್ಯಕ್ರಮದಲ್ಲಿ ಮಾತೆಯರು ಭಾರತಮಾತೆಗೆ ಅರ್ಚನೆ ಸಲ್ಲಿಸಿ, ಬಳಿಕ ಮಾತೃಭೋಜನದಲ್ಲಿ ಪಾಲ್ಗೊಂಡರು.


